ಬೆಂಗಳೂರು : ಪಕ್ಷ ಬಿಟ್ಟು ಹೋಗೋರು ಹೋಗಲಿ. ಮೈಸೂರು ಪೇಟ, ಶಾಲು ಹಾಕಿ ನಾನೇ ಸನ್ಮಾನ ಮಾಡಿ ಕಳುಹಿಸಿಕೊಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ( HD Kumaraswamy ) ಪರೋಕ್ಷವಾಗಿ ಶಾಸಕ ಜಿ.ಟಿ.ದೇವೇಗೌಡ ( GT Deve Gowda )ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷ ಬಿಡುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಈಗ ಮೂರು ಜನ ಬಿಟ್ಟು ಹೋದ್ರು. ನಮ್ಮ ಪಕ್ಷ ಏನು ಮುಳುಗೇ ಹೋಯ್ತಾ?.
ಮಹಾಭಾರತ, ಅಶೋಕ ಚಕ್ರವರ್ತಿ, ರಾಮಾಯಣ ಎಲ್ಲವನ್ನೂ ನಾನು ನೋಡುತ್ತಿದ್ದೇನೆ. ರಾಜಕಾರಣ ಅನ್ನೋದು ಈಗಿನಿಂದ ಆರಂಭವಾಗಿರೋದಲ್ಲ, ಆಗಿನ ಕಾಲದಿಂದಲೂ ಇದೆ.
ಪಕ್ಷ ಬಿಟ್ಟು ಹೋಗೋರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಕರ್ಣ ಕಣ್ಣೀರು ಹಾಕುತ್ತಾ ಕೃಷ್ಣನನ್ನು ಕೇಳ್ತಾನೆ, ಈ ಯುದ್ಧ ಬೇಕಿತ್ತಾ ಅಂತಾ ಅಳಲು ತೋಡಿಕೊಳ್ತಾನೆ.
ಇದನ್ನೂ ಓದಿ : ಎರಡು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ : ಸಿ.ಟಿ.ರವಿ ವಿಶ್ವಾಸ
ಆ ಕಾಲದಲ್ಲೇ ಜಾತಿ ಪ್ರಸ್ತಾಪ ಆಗುತ್ತದೆ. ಯಾರು ಸ್ವಾರ್ಥಕ್ಕೆ ಮುಂದಾಗ್ತಾರೆ ಅವರನ್ನು ಧರ್ಮ ಕೈಹಿಡಿಯಲ್ಲ ಅಂತಾ ಹೇಳ್ತಾನೆ.
ಇದಕ್ಕಿಂತ ನಮಗೆ ಬುದ್ಧಿ ಕಲಿಯಲು ಇನ್ನೇನು ಬೇಕು ಎಂದು ಮಹಾಭಾರತದ ಪ್ರಸಂಗವನ್ನು ಈಗಿನ ರಾಜಕೀಯಕ್ಕೆ ಹೋಲಿಕೆ ಮಾಡಿದರು.
ಇದೇ ವೇಳೆ ಮಂಡ್ಯದಲ್ಲಿ ಕಾಂಗ್ರೆಸ್ ವತಿಯಿಂದ ರೈತರ ಸಮಾವೇಶ ನಡೆಯುತ್ತಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಕಾಂಗ್ರೆಸ್ ನವರು ವಿಶೇಷ ಕಾಳಜಿ ವಹಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಇನ್ನೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಕಾಂಗ್ರೆಸ್ ನ ಯಾರೊಬ್ಬರೂ ಅವರ ಕಷ್ಟ ಆಲಿಸಲು ಹೋಗಲೇ ಇಲ್ಲ.
ಇದನ್ನೂ ಓದಿ : ಅ.25ಕ್ಕೆ `ಕೈ’ ಹಿಡೀತಾರೆ ಶರತ್ ಬಚ್ಚೇಗೌಡ: `ಹಸ್ತದ ಜತೆ ಶರತ್’ ಫೋಟೋ ವೈರಲ್
ಈಗ ಕಾಂಗ್ರೆಸ್ ನವರು ಮಂಡ್ಯದಿಂದಲೇ ರೈತರ ಸಮಾವೇಶ ಆರಂಭ ಮಾಡಿದ್ದಾರೆ. ಇವರಿಗೆ ದಿಢೀರನೆ ಮಂಡ್ಯದ ರೈತರ ಮೇಲೆ ಪ್ರೀತಿ ಬಂದಿದೆ. ರೈತರೇನು ಅದನ್ನು ಅರಿಯದಷ್ಟು ದಡ್ಡರೇನಲ್ಲಾ ಎಂದು ಕಿಡಿಕಾರಿದರು.