ಮಹಾಮಾರಿ ಕೊರೊನಾ ವೈರಸ್ ಈಗಾಗಲೇ 162 ರಾಷ್ಟ್ರ ದಲ್ಲಿ ಕಾಣಿಸಿಕೊಂಡಿದ್ದು, ಈವರೆಗೆ 7,171 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಮತ್ತೆರಡು ಹೊಸ ಪ್ರಕರಣಗಳು ದೃಢಪಟ್ಟಿದ್ದು, ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ.
ಕಲಬುರಗಿಯಲ್ಲಿ ಸಾವನ್ನಪ್ಪಿದ್ದ 76 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ದೃಢಪಟ್ಟಿದೆ. ಕೊರೊನಾ ಸೋಂಕಿತ ವೈದ್ಯರನ್ನು ಸದ್ಯ ಮನೆಯಲ್ಲೇ ನಿಗಾದಲ್ಲಿ ಇಟ್ಟಿದ್ದು, ತಕ್ಷಣವೇ ಇಎಸ್ಐ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಐಸೋಲೇಟೆಡ್ ವಾರ್ಡ್ ಗೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಇಂದು ಬೆಳಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಮತ್ತೆರಡು ಕೋವಿಡ್- 19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಹತ್ತಕ್ಕೆರಿದೆ. ಬೆಂಗಳೂರಿನಲ್ಲಿ ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಕಲಬುರಗಿಯಲ್ಲಿ (ಈ ಮೊದಲೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ) 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಹೇಳಿದ್ದಾರೆ.








