ಶಿವಾಜಿ ಪಾರ್ಕ್ ನಿಂದ ಐಪಿಎಲ್ ಅಂಗಣಕ್ಕೆ ಬಂದ ತುಷಾರ್ ದೇಶಪಾಂಡೆ
ತುಷಾರ್ ದೇಶಪಾಂಡೆ… ದೇಸಿ ಕ್ರಿಕೆಟ್ ನಲ್ಲಿ ಈ ಹೆಸರು ಚಿರಪರಿಚಿತ. ಆದ್ರೆ ಕ್ರಿಕೆಟ್ ಜಗತ್ತಿಗೆ ಗೊತ್ತಾಗಿದ್ದು ಮೊನ್ನೆ ಮೊನ್ನೆಯಷ್ಟೇ.
ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡ ಪರ ಆಡುತ್ತಿರುವ ತುಷಾರ್ ಮುಂಬೈ ಕ್ರಿಕೆಟಿಗ.
ರಾಜಸ್ತಾನ ರಾಯಲ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ್ದ ತುಷಾರ್ ದೇಶಪಾಂಡೆ ಈಗ ಹೀರೋ ಆಗಿಬಿಟ್ಟಿದ್ದಾರೆ.
ಕೆಲವು ವರ್ಷಗಳ ಹಿಂದೆ ಐಪಿಎಲ್ ನಲ್ಲಿ ತುಷಾರ್ ದೇಶಪಾಂಡೆ ಬಾಲ್ ಬಾಯ್ ಆಗಿದ್ದರು.
ಮುಂದೊಂದು ದಿನ ತಾನು ಐಪಿಎಲ್ ನಲ್ಲಿ ಆಡುತ್ತೇನೆ ಅಂತ ಅಂದುಕೊಂಡಿರಲಿಲ್ಲ.
ಆದ್ರೆ ಈಗ ಐಪಿಎಲ್ ನಲ್ಲಿ ಗಮನ ಸೆಳೆದಿರುವ ತುಷಾರ್ ಇದೇ ರೀತಿಯ ಪ್ರದರ್ಶನ ನೀಡಿದ್ರೆ ಟೀಮ್ ಇಂಡಿಯಾದಲ್ಲಿ ಆಡಿದ್ರೂ ಅಚ್ಚರಿ ಏನಿಲ್ಲ.
ಹಾಗೇ ನೋಡಿದ್ರೆ ತುಷಾರ್ ದೇಶಪಾಂಡೆಯ ಕ್ರಿಕೆಟ್ ಜರ್ನಿಯೇ ರೋಚಕ.
ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರ ಬಾಲ್ಯ ಸ್ನೇಹಿತನಾಗಿರುವ ತುಷಾರ್ ಚಾಣಕ್ಯ ಬೌಲರ್.
ಬಾಲ್ಯದಲ್ಲೇ ಅಯ್ಯರ್ ಮತ್ತು ತುಷಾರ್ ಜೊತೆ ಜೊತೆಯಾಗಿ ಆಡಿ ಬೆಳೆದವರು. ಅಯ್ಯರ್ ಮತ್ತು ತುಷಾರ್ ಪರಸ್ಪರ ಚಾಲೆಂಜ್ ಮಾಡಿಕೊಂಡು ಆಡುತ್ತಿದ್ದರು.
ಈ ಚಾಲೆಂಜ್ ನಲ್ಲಿ ದುಡ್ಡು ಕಳೆದುಕೊಂಡಿದ್ದು ಮಾತ್ರ ಶ್ರೇಯಸ್ ಅಯ್ಯರ್.
ಆದ್ರೆ ಶ್ರೇಯಸ್ ಅಯ್ಯರ್ ತುಷಾರ್ ಗಿಂತ ಮುನ್ನವೇ ಟೀಮ್ ಇಂಡಿಯಾ ಸೇರಿಕೊಂಡಿದ್ದರು.
ಇದೀಗ ಗೆಳೆಯ ತುಷಾರ್ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅವಕಾಶವನ್ನು ಮಾಡಿಕೊಟ್ಟಿದ್ದರು ಅಯ್ಯರ್.
ಗೆಳೆಯ ನೀಡಿದ್ದ ಅವಕಾಶವನ್ನು ತುಷಾರ್ ಸರಿಯಾಗಿಯೇ ಬಳಸಿಕೊಂಡ್ರು.
ಗೆಳೆಯ ನೀಡಿದ್ದ ಅವಕಾಶಕ್ಕೆ ತಕ್ಕ ಫಲವನ್ನು ನೀಡಿದ್ದರು.
ಅದು 2007 ವರ್ಷ. ಮುಂಬೈನ ಶಿವಾಜಿ ಪಾರ್ಕ್ ಜಿಮ್ಖಾನದಲ್ಲಿ ಬಿಪಿಎಲ್ ಅಕಾಡೆಮಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.
ಆ ಆಯ್ಕೆ ಪ್ರಕ್ರಿಯೆಯಲ್ಲಿ ತುಷಾರ್ ಕೂಡ ಭಾಗಿಯಾಗಿದ್ದರು.
ಆಯ್ಕೆ ಪ್ರಕ್ರಿಯೆಗೆ ಸುಮಾರು 40-45 ಮಂದಿ ಯುವ ಆಟಗಾರರು ಬಂದಿದ್ದರು.
ಇದ್ರಲ್ಲಿ ಸುಮಾರು 20-25 ಮಂದಿ ಬ್ಯಾಟಿಂಗ್ ಗಾಗಿ ಪ್ಯಾಡ್ ಕಟ್ಟಿಕೊಂಡಿದ್ದರು. ಬೌಲರ್ ಗಳ ಸಾಲಿನಲ್ಲಿ 15-20 ಮಂದಿ ಇದ್ರು.
ಆಗ ತುಷಾರ್ ಗೆ ಅನ್ನಿಸಿದ್ದು ತನಗೆ ಅವಕಾಶ ಸಿಗಲ್ಲ ಅಂತ. ಯಾಕಂದ್ರೆ ಆಗಲೇ ಸಮಯವೂ ಮೀರಿ ಹೋಗಿತ್ತು.
ಕೊನೆಗೂ ತುಷಾರ್‍ಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಅದು ಕೂಡ ಹೊಸ ಚೆಂಡಿನಲ್ಲಿ.
ಮೊದಲ ಎಸೆತವನ್ನೇ ಬನಾನಾ ಔಟ್ ಸ್ವಿಂಗ್ ಮೂಲಕ ಗಮನ ಸೆಳೆದ ತುಷಾರ್‍ಗೆ ಶಹಬ್ಬಾಸ್ ಗಿರಿ ಸಿಕ್ಕಿತ್ತು.
ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಿಯಾ ಅಂತ ಪದ್ಮಾಕರ್ ಶಿವಾಲ್ಕರ್ ಅವರಿಂದ ಮೆಚ್ಚುಗೆ ಕೂಡ ವ್ಯಕ್ತವಾಯ್ತು. ಆಗ ಪದ್ಮಾಕರ್ ಯಾರು ಅಂತ ತುಷಾರ್‍ಗೆ ಗೊತ್ತಿರಲಿಲ್ಲ.
6-7 ಎಸೆತಗಳನ್ನು ಹಾಕಿದ್ದ ತುಷಾರ್ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆ ಕೂಡ ಆದ್ರು.
ನಂತರ ಹಿಂತಿರುಗಿ ನೋಡಲೇ ಇಲ್ಲ. ಮುಂಬೈ ರಣಜಿ ತಂಡದ ಪರ ಆಡುವ ಅವಕಾಶವೂ ಸಿಕ್ಕಿತ್ತು.
ಹಾಗೇ ಮಂಬೈ ತಂಡ ದಶಕಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ತುಷಾರ್ ಪಾತ್ರ ಮಹತ್ವದ್ದಾಗಿತ್ತು.
ಇದೇ ವೇಳೆ ತನ್ನ ತಾಯಿಯನ್ನು ಕಳೆದುಕೊಂಡಿರುವ ನೋವು ತುಷಾರ್ ಅವರನ್ನು ಕಾಡುತ್ತಿದೆ.
ಆದ್ರೂ ಕ್ರಿಕೆಟ್ ಮೇಲಿನ ಪ್ರೀತಿ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ತುಷಾರ್ ಈ ಮಟ್ಟಕ್ಕೆ ಬೆಳೆದಿದ್ದಾರೆ.
ತುಷಾರ್ ಹಾದಿ ಇನ್ನೂ ದೊಡ್ಡದಿದೆ. ಇದಕ್ಕಾಗಿ ಅವರು ಇನ್ನಷ್ಟು ಪರಿಶ್ರಮ ಪಡಬೇಕಿದೆ.
ಸ್ಥಿರ ಪ್ರದರ್ಶನ ನೀಡುತ್ತಾ ತನ್ನ ತಾಯಿಯ ಕನಸನ್ನು ನನಸು ಮಾಡುವ ಹಾದಿಯಲ್ಲಿ ಮುನ್ನಡೆಯಬೇಕಿದೆ.








