ವಿಶ್ವದಾದ್ಯಂತ ಕೊರೊನಾ ವೈರಸ್ ಮರಣ ಮೃದಂಗ ಭಾರಿಸುತ್ತಿದೆ. ದೇಶ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಾನವ ಕುಲವನ್ನೇ ಭೂತದಂತೆ ಕೊರೊನಾ ವೈರಸ್ ಕಾಡುತ್ತಿದೆ. ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭಯ ಭೀತಿಯಿಂದ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಸಹಜವಾಗಿ ಹರಕೆ ಸಲ್ಲಿಸಲು ರಥೋತ್ಸವಕ್ಕೆ ಬಾಳೆಹಣ್ಣು ಎಸೆಯುತ್ತಾರೆ. ಆದರೆ ಇಲ್ಲೊಬ್ಬ ಭಕ್ತ “ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು” ಎಂದು ಬಾಳೆಹಣ್ಣಿನ ಮೇಲೆ ಬರೆದು, ಅದೇ ಬಾಳೆ ಹಣ್ಣನ್ನು ತೇರಿಗೆ ಎಸೆಯುವ ಮೂಲಕ ದೇವರ ಮೊರೆ ಹೋಗಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಎನ್. ಜಿ ಹಳ್ಳಿಯಲ್ಲಿ ಶನಿವಾರ , ಶ್ರೀ ಮುತ್ತಿನ ಕುಮಾರಿ ದೇವಿಯ ಜಾತ್ರೆ ನಡೆದಿತ್ತು. ಜಾತ್ರೆಯ ಭಾಗವಾಗಿ ರಥೋತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅದೇ ಗ್ರಾಮದ ಪ್ರದೀಪ್ ಎಂಬ ಯುವಕನು ಕೊರೊನಾ ಭಾರತ ಬಿಟ್ಟು ತೊಲಗು ಅಂತ ಬರೆದು ಬಾಳೆಹಣ್ಣು ರಥಕ್ಕೆ ಎಸೆದು, ದೇವರನ್ನು ಪ್ರಾರ್ಥಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.








