ಕರ್ನಾಟಕ ವಿಧಾನಸಭೆ ಕಲಾಪ ಅಂದರೆ ಒಂದಷ್ಟು ಹಾಸ್ಯ, ಹರಟೆ, ಕೋಪ, ತಾಪ ಇವೆಲ್ಲ ಕಾಮನ್ . ಇಂದಿನ ಅಧಿವೇಶನದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ವಿಧ್ಯಾರ್ಥಿ ಜೀವನ ನೆನೆದು ಸದನದಲ್ಲಿ ಹಾಸ್ಯ ಚಟಾಕಿ ಹಾರಿಸಿದರು. ಆಗ ಸದನದವಿಡಿ ನಗೆಯಲ್ಲಿ ತೇಲಿತು. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಜಾರಿ ಮಾಡಿರುವ ಕೆಲ ಭಾಗ್ಯಗಳನ್ನು ಬಿಜೆಪಿ ಸರ್ಕಾರ ಕೈ ಬಿಡಲು ಮುಂದಾಗಿದೆ. ಇದನ್ನು ವಿರೋಧಿಸಿದ ಸಿದ್ದರಾಮಯ್ಯ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುವುದನ್ನು ಬಿಡಬಾರದು. ಇಂದಿರಾ ಕ್ಯಾಂಟಿನ್ ಯೋಜನೆ ಮತ್ತು ವಿದ್ಯಾಸಿರಿ ಯೋಜೆನೆ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದ ಸಿದ್ದರಾಮಯ್ಯ, ನನ್ನ ತಂದೆ ನನಗೆ ಹಾಸ್ಟೇಲ್ ಸೇರಿಸಲಿಲ್ಲ. ಆಗ ರೂಮ್ ಮಾಡಿ ಬಿ.ಎಸ್.ಸಿ ಓದು ಮುಗಿಸಿದ್ದೇನೆ. ರೂಮ್ ನಲ್ಲಿ ಅನ್ನ ಮಾಡಿ, ಹೊಟೇಲ್ ನಿಂದ ಸಾಂಬರ್ ತಂದು ಊಟ ಮಾಡುತ್ತಿದ್ದೆ. ಊಟದ ನಂತರ ಪಾತ್ರೆ ತೊಳಕ್ಕೊಂಡು ಓದಿದೆ. ಎರಡು ವರ್ಷಗಳ ನಂತರ ದೊಡ್ಡಯ್ಯ ಎಂಬ ಮೆಸ್ ನಲ್ಲಿ ಊಟ ಮಾಡಲು ಶುರು ಮಾಡಿದೆ. ಅಲ್ಲಿ ಒಂದು ತಿಂಗಳಿಗೆ 35 ರೂಪಾಯಿ ಕೊಟ್ರೆ ದಿನಕ್ಕೆ ಎರಡು ಊಟ ಕೊಡುತ್ತಿದ್ದರು.
ನಾನು ಬಿ.ಎಸ್.ಸಿ ಮತ್ತು ಲಾ ಮುಗಿಯುವರೆಗೂ ಅದೇ ಮೆಸ್ ನಲ್ಲಿ ಊಟ ಮಾಡಿದ್ದೆ. ಓದು ಮುಗಿದ ಬಳಿಕ ಲಾಯರ್ ವೃತ್ತಿ ಪ್ರಾರಂಭಿಸಿದ್ದೆ. ಆಗಲೂ ಕೆಲವೊಂದು ಸಾರಿ ಹಣ ಇರುತ್ತಿರಲಿಲ್ಲ. ಆಗ ಮೆಸ್ ಗೆ ಹೋಗಿ ಊಟ ಮಾಡಿ ಬರುತ್ತಿದ್ದೆ. ಹೀಗೆ ಎಲ್ಲಾ ಕಡೆನೂ ಸಾಲ ಮಾಡಿಕೊಳ್ಳುತ್ತಿದೆ. ಹಣ ಬಂದ ತಕ್ಷಣವೇ ಹೋಗಿ ಸಾಲ ತೀರಿಸುತ್ತಿದ್ದೆ ಎಂದರು . ಆಗ ಮಧ್ಯ ಪ್ರವೇಶಿಸಿದ ಕೆ.ಆರ್ ರಮೇಶ್ ಕುಮಾರ ಅದಕ್ಕೆ ಒಳ್ಳೆಯ ಹಣಕಾಸು ಮಂತ್ರಿ ಎನ್ನಿಸಿಕೊಂಡಿದ್ದೀರಿ ತಾವು ಎಂದು ನಗುತ್ತಲೇ ಸಿದ್ದರಾಮಯ್ಯನವರ ಕಾಲೆಳೆದರು. ಇದಾದ ಬಳಿಕ ಮಾತು ಮುಂದುವರೆಸಿದ ಸಿದ್ದರಾಮಯ್ಯ, ನಾನು ಲಾಯರ್ ವೃತ್ತಿ ಮಾಡುವ ಸಿಗರೇಟ್ ಸೇದುತ್ತಿದ್ದೆ. ಆಗ ಕೋರ್ಟ್ ಹತ್ತಿರ ಒಬ್ಬ ಮಹಿಳೆ ಅಲ್ಲಿ ಸಿಗರೇಟ್ ಮಾರುತ್ತಿದ್ದಳು. ಆ ಮಹಿಳೆ ಕಡೆ ಸಾಲ ಮಾಡಿ ಸಿಗರೇಟ್ ಸೇದುತ್ತಿದ್ದೆ. ಆ ಸಾಲವನ್ನು ಎಂ.ಎಲ್.ಏ ಆದ ನಂತರ ಹೋಗಿ ಕೊಟ್ಟಿದ್ದೆ ಎಂದರು. ಸಿದ್ದರಾಮಯ್ಯನವರ ಮಾತು ಕೇಳಿ ಇಡಿ ಸದನವೇ ನಗೆಯಲ್ಲಿ ತೇಲಿತು.








