ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಇಂದು ವಿಶ್ವಾಸಮತಯಾಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕಮಲ್ ನಾಥ್ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ಇಂದು ಸಂಜೆ 5 ಗಂಟೆಯ ಒಳಗೆ ಪ್ಲೋರ್ ಟೆಸ್ಟ್ ನಡೆಸಲೇಬೇಕಾದ ಅನಿವಾರ್ಯತೆಯಲ್ಲಿ ಸ್ಪೀಕರ್ ಎನ್ ಪಿ ಪ್ರಜಾಪತಿ, ಅಧಿವೇಶನವನ್ನು ಕರೆದಿದ್ದಾರೆ. ಮೇಲಾಗಿ ಜ್ಯೋತಿರಾದಿತ್ಯ ಸಿಂಧ್ಯಾ ಬೆಂಬಲಿತರ ರಾಜೀನಾಮೆಯನ್ನು ಅವರು ಅಂಗೀಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ತನ್ನ ಸರ್ಕಾರ ಉಳಿಸಿಕೊಳ್ಳುವ ಎಲ್ಲಾ ಹೋರಾಟಗಳು ಅಂತ್ಯವಾಗಿದೆ. ಹೀಗಾಗಿ ಇವತ್ತು ವಿಶ್ವಾಸ ಮತಯಾಚನೆಗೂ ಮೊದಲೆ ಸಿಎಂ ಕಮಲ್ ನಾಥ್ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಅರಳುತ್ತಾ ಕಮಲ?
22 ಶಾಸಕರ ರಾಜೀನಾಮೆ ಅಂಗೀಕಾರವಾದ ಬಳಿಕ ಸದನದ ಬಲ 206ಕ್ಕೆ ಕುಸಿದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ 92 ಶಾಸಕರನ್ನು ಹೊಂದಿದೆ. ಎಸ್ ಪಿ 2, ಬಿ.ಎಸ್.ಪಿ 1 ಪಕ್ಷತೇರ 4 ಜನ ಶಾಸಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಸರಳ ಬಹುಮತಕ್ಕೆ 104 ಶಾಸಕರ ಅಗತ್ಯವಿದೆ. ಐದು ಶಾಸಕರ ಕೊರತೆ ಆಡಳಿತ ಪಕ್ಷಕ್ಕೆ ಎದುರಾಗಿದೆ. ಇದರಿಂದ ಕಮಲ್‌ನಾಥ್ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ. ಮಧ್ಯಪ್ರದೇಶದ ಬಿಜೆಪಿ 107 ಶಾಸಕರ ಬಲ ಹೊಂದಿದೆ. ಸರಳ ಬಹುಮತಕ್ಕಿಂತ ಮೂರು ಶಾಸಕ ಬಲ ಹೆಚ್ಚು ಬಿಜೆಪಿ ಹೊಂದಿದೆ. ಇದರಿಂದ ಮಧ್ಯಪ್ರದೇಶದಲ್ಲಿ ಕೇಸರಿ ಭಾವುಟ ಹಾರಿಸಲು ಬಿಜೆಪಿ ಸಜ್ಜಾಗಿದೆ.









