ಐಪಿಎಲ್ 2020- ಪ್ಲೇ ಆಫ್ ನಲ್ಲಿ ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ ಕಾದಾಟ.. ಗೆಲ್ಲೋರು ಯಾರು ?
2020ರ ಐಪಿಎಲ್ ಟೂರ್ನಿಯ ಅಂತಿಮ ಘಟ್ಟದ ಮೊದಲ ಪಂದ್ಯ ಇಂದು ನಡೆಯಲಿದೆ.
ಟೂರ್ನಿಯ ಅಗ್ರ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಆಡಿರುವ 14 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. 5 ಪಂದ್ಯಗಳಲ್ಲಿ ಸೋತು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಹಂತದ ಏಳು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಹಂತದಲ್ಲಿ ನೀರಸ ಪ್ರದರ್ಶನ ನೀಡಿದೆ.
ಆದ್ರೂ ಟೂರ್ನಿಯ 14 ಪಂದ್ಯಗಳಲ್ಲಿ ಎಂಟು ಪಂದ್ಯಗಳಲ್ಲಿ ಜಯ ಮತ್ತು ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಇದೀಗ ಪ್ಲೇ ಆಫ್ ಪಂದ್ಯ ಮಹತ್ವ ಪಡೆದುಕೊಂಡಿದೆ. ಇಲ್ಲಿ ಸೋತ ತಂಡಕ್ಕೂ ಮತ್ತೊಂದು ಅವಕಾಶವಿದೆ. ಆದ್ರೂ ಅಂತಹ ರಿಸ್ಕ್ ತೆಗೆದುಕೊಳ್ಳಲು ಉಭಯ ತಂಡಗಳು ರೆಡಿ ಇಲ್ಲ. ಹಾಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಉಮೇದಿನಲ್ಲಿವೆ ಎರಡು ತಂಡಗಳು.
ಹಾಗೇ ನೋಡಿದ್ರೆ ಎರಡೂ ತಂಡಗಳು ಬಲಿಷ್ಠವಾಗಿದೆ. ಬ್ಯಾಟಿಂಗ್ – ಬೌಲಿಂಗ್ ನಲ್ಲೂ ಸಮಬಲದ ಹೋರಾಟವನ್ನು ಎದುರು ನೋಡಬಹುದು.
ಮುಂಬೈ ಇಂಡಿಯನ್ಸ್ ತಂಡಕ್ಕೆ ಅನುಭವಿ ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ ಅವರ ಉತ್ತಮ ಆರಂಭದ ಜೊತೆಗೆ ಸೂರ್ಯ ಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ಹಾಗೇ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕಿರಾನ್ ಪೊಲಾರ್ಡ್ ಅವರ ಹೊಡಿಬಡಿ ಆಟ ತಂಡಕ್ಕೆ ಬೋನಸ್ ಆಗುತ್ತಿದೆ.
ಮತ್ತೊಂದೆಡೆ ಬೌಲಿಂಗ್ ನಲ್ಲಿ ಜಸ್ಪ್ರಿತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಮತ್ತು ನಥನ್ ನೇಲ್ ವೇಗ ಹಾಗೂ ಕೃನಾಲ್ ಪಾಂಡ್ಯ ಮತ್ತು ರಾಹುಲ್ ಚಾಹರ್ ಅವರ ಸ್ಪಿನ್ ಜಾದು ಎದುರಾಳಿ ತಂಡಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಮತ್ತು ಯುವ ಆಟಗಾರರನ್ನೊಳಗೊಂಡಿದೆ. ಯಾವುದೇ ಹಂತದಲ್ಲೂ ತಿರುಗೇಟು ನೀಡುವಂತಹ ಸಾಮಥ್ರ್ಯ ಹೊಂದಿದೆ.
ಆದ್ರೆ ಭರವಸೆ ಮೂಡಿಸಿರುವ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಇದು ತಂಡಕ್ಕೆ ಚಿಂತೆಯನ್ನುಂಟು ಮಾಡುತ್ತಿದೆ.
ಪೃಥ್ವಿ ಶಾ ಮತ್ತು ಶಿಖರ್ ಧವನ್ ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ರೆ ತಂಡಕ್ಕೆ ಚಿಂತೆ ಇಲ್ಲ. ಯಾಕಂದ್ರೆ ಮಧ್ಯಮ ಕ್ರಮಾಂಕದಲ್ಲಿ ಅಜ್ಯಂಕ್ಯಾ ರಹಾನೆ, ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ತಂಡಕ್ಕೆ ಆಧಾರವಾಗಬಹುದು. ಹಾಗೇ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಅವರ ಅಬ್ಬರದ ಬ್ಯಾಟಿಂಗ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಆದ್ರೆ ಪೃಥ್ವಿ ಶಾ, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಬ್ಯಾಟ್ ನಿಂದ ಇನ್ನೂ ಕೂಡ ದೊಡ್ಡ ಮೊತ್ತದ ರನ್ ಹರಿದು ಬಂದಿಲ್ಲ. ಈ ಮೂವರು ಆಟಗಾರರು ಲಯ ಕಂಡುಕೊಂಡ್ರೆ ಮುಂಬೈ ಬೌಲರ್ ಗಳು ದುಬಾರಿಯಾಗಬಹುದು.
ಇನ್ನು ಡೆಲ್ಲಿ ತಂಡಕ್ಕೆ ಕಾಗಿಸೊ ರಬಾಡ ಮತ್ತು ಆನ್ರಿಚ್ ನೊರ್ಟೆಜ್ ಅವರೇ ಪ್ರಮುಖ ಅಸ್ತ್ರಗಳು. ಜಿದ್ದಿಗೆ ಬಿದ್ದಂತೆ ಬೌಲಿಂಗ್ ಮಾಡುತ್ತಿರುವುದು ಮುಂಬೈ ಬ್ಯಾಟ್ಸ್ ಮೆನ್ ಗಳಿಗೆ ರನ್ ವೇಗಕ್ಕೆ ಅಡ್ಡಿಯನ್ನುಂಟು ಮಾಡಬಹುದು. ಅಲ್ಲದೆ ಡೇನಿಯಲ್ ಸ್ಯಾಮ್ಸ್ ಕೂಡ ಹೆಚ್ಚುವರಿ ಬೌಲರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಸ್ಪಿನ್ ಬೌಲಿಂಗ್ ನಲ್ಲಿ ಅಕ್ಷರ್ ಪಟೇಲ್ ಮತ್ತು ಆರ್. ಅಶ್ವಿನ್ ಅತ್ಯುತ್ತಮ ಲಯದಲ್ಲಿದ್ದಾರೆ.
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಕಾದಾಟ ರೋಚಕವಾಗಿ ಅಂತ್ಯಗೊಳ್ಳಬಹುದು.