ಬೆಂಗಳೂರು: ದೀಪಾವಳಿ ಹಬ್ಬದ ಪಟಾಕಿ ಖುಷಿಯನ್ನು ಠುಸ್ ಎನಿಸಿರುವ ರಾಜ್ಯ ಸರ್ಕಾರ ಇಂದು ಪಟಾಕಿ ಸಿಡಿಸುವುದು ಹಾಗೂ ಮಾರಾಟ ಸಂಬಂಧ ಹೊಸ ಗೈಡ್‍ಲೈನ್ಸ್ ಪ್ರಕಟಿಸುವ ಸಾಧ್ಯತೆ ಇದೆ.
ನಿನ್ನೆಯಷ್ಟೇ ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದು ಹಾಗೂ ಮಾರಾಟ ಮಾಡುವುದನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಒಂದು ವೇಳೆ ಆದೇಶ ಉಲ್ಲಂಘಿಸಿ ಪಟಾಕಿ ಮಾರಾಟ ಹಾಗೂ ಸಿಡಿಸಿದರೆ ದಂಡ ಹಾಗೂ ಶಿಕ್ಷೆಯ ಕುರಿತು ಯಾವುದೇ ಪ್ರಸ್ತಾಪ ಮಾಡಿರಲಿಲ್ಲ.
ಹೀಗಾಗಿ ಇಂದು ಶಿಕ್ಷೆ ಹಾಗೂ ದಂಡದ ಕುರಿತಂತೆ ಸುದೀರ್ಘ ಚರ್ಚೆ ನಡೆಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾನ್ಯ ಪಟಾಕಿ ಬದಲು ಗ್ರೀನ್ ಪಟಾಕಿ ಬಳಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಜನರ ಬೇಡಿಕೆಗೆ ಅನುಗುಣವಾಗಿ ಹಸಿರು ಪಟಾಕಿಗಳು ಸಿಗುತ್ತವಾ, ಅವುಗಳ ಲಭ್ಯತೆ ಬಗ್ಗೆ ಸರ್ಕಾರದಿಂದ ಮಾಹಿತಿ ಸಿಗಬಹುದಾ ಎಂಬುದು ಇನ್ನೂ ಖಚಿತವಾಗಿಲ್ಲ.
ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿದ್ದೇಕೆ..?
ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಚಳಿಗಾಲ ಆರಂಭವಾಗಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಉಸಿರಾಟದ ತೊಂದರೆ ಇರುವವರಿಗೇ ಕೊರೊನಾ ಬಹುಬೇಗ ಅಂಟಿಕೊಳ್ಳುವುದರಿಂದ ಪಟಾಕಿ ಸಿಡಿತದಿಂದ ಬರುವ ಹೊಗೆ, ಧೂಳಿನ ಮೂಲಕ ಮತ್ತಷ್ಟು ಜನರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಲಿದೆ. ಪರೋಕ್ಷವಾಗಿ ಇದು ಕೊರೊನಾ ಸೋಂಕು ಹರಡುವ ರಾಜಮಾರ್ಗವಾಗಬಹುದು ಎಂಬುದು ರಾಜ್ಯ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಪಟಾಕಿ ಸಿಡಿತದಿಂದ ಆಗುವ ಸಮಸ್ಯೆಗಳು…
ಉಸಿರಾಟದ ತೊಂದರೆ ಇರುವವರಿಗೆ ತೊಂದರೆ
ಪಟಾಕಿ ಹೊಗೆಯಿಂದ ಶ್ವಾಸಕೋಶದಲ್ಲಿ ಊತ ಆಗುತ್ತೆ
ಮಕ್ಕಳು ವೃದ್ಧರು, ಮಕ್ಕಳ ಶ್ವಾಸಕೋಶಕ್ಕೆ ಹಾನಿ
ಹಾನಿಕಾರಕ ಪಟಾಕಿಯಲ್ಲಿ ಕ್ಯಾನ್ಸರ್ ಕಾರಕ ಕಣಗಳಿವೆ
ಪಟಾಕಿ ಹೊಗೆಯಿಂದ ಕೊರೊನಾ ಸೋಂಕಿತರಿಗೆ ತೊಂದರೆ
ಸಾಮಾನ್ಯ ಪಟಾಕಿಗಳಿಂದ ಶಬ್ದ ಮಾಲಿನ್ಯದ ಜತೆ ವಾಯು ಮಾಲಿನ್ಯ ಹೆಚ್ಚಾಗಲಿದೆ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಹೆಚ್ಚಳವಾದರೆ ಅದು ನೇರವಾಗಿ ಉಸಿರಾಟದ ಸಮಸ್ಯೆ ಇರುವವರಿಗೆ ತೊಂದರೆ ಕೊಡುತ್ತದೆ. ಉಸಿರಾಟದ ಸಮಸ್ಯೆ ಹೆಚ್ಚಾದ್ರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೊರೊನಾ ಸಂಖ್ಯೆ ಹೆಚ್ಚಳ ಆಗುವ ಅಪಾಯವಿದೆ. ಉಸಿರಾಟದ ಸಮಸ್ಯೆ ಹೆಚ್ಚಾದರೆ ಐಸಿಯುಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆರೋಗ್ಯ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಆಸ್ಪತ್ರೆಗಳಲ್ಲಿ ಐಸಿಯುಗಾಗಿ ಜನರು ಪರದಾಟ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಸಿರು ಪಟಾಕಿಗಳು ಸುರಕ್ಷಿತವೇ..!
ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳಿಂದ ಮಾಲಿನ್ಯ ಪ್ರಮಾಣ ಶೇ.30ರಷು ಕಡಿಮೆ. ಹಸಿರು ಪಟಾಕಿಗಳಿಂದ ಮಾಲಿನ್ಯ ಕಡಿಮೆಯಾಗುವುದರ ಜತೆಗೆ ದೂಳು, ಹೊಗೆ, ಭಾರಿ ಶಬ್ದ ಬರಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಬಿಡುಗಡೆ ಮಾಡಿತ್ತು.
ಹಸಿರು ಪಟಾಕಿಗಳನ್ನು ಕೇಂದ್ರೀಯ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ ತಯಾರಿಸಿತ್ತು. 2018ರಲ್ಲಿ ದೀಪಾವಳಿ ಹಬ್ಬಕ್ಕೂ ಮೊದಲೇ ಸುಪ್ರೀಂಕೋರ್ಟ್ ಸಾಮಾನ್ಯ ಪಟಾಕಿ ಸಿಡಿಸುವುದು ಹಾಗೂ ಮಾರಾಟ ನಿಷೇಧಿಷಿಸಿದ್ದರೂ ಕೂಡ ನಂತರದ ದಿನಗಳಲ್ಲಿ ಅನುಷ್ಠಾನಕ್ಕೆ ಬರಲೇ ಇಲ್ಲ.
ಈ ಬಾರಿ ದೇಶಾದ್ಯಂತ ಹೆಮ್ಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿ, ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಲಾಗಿದೆ. ಸರ್ಕಾರ ಪಟಾಕಿ ಮಾರಾಟ ಬ್ಯಾನ್ ಮಾಡಿ ನಿನ್ನೆ ಆದೇಶ ಹೊರಡಿಸಿದ ಬೆನ್ನಲ್ಲೇ ಕದ್ದುಮುಚ್ಚಿ ಪಟಾಕಿ ಮಾರಾಟ ಜೋರಾಗಿಯೇ ನಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel