`ಆರ್ ಸಿಬಿ ಕಪ್ ಗೆಲ್ಲಬೇಕಿದ್ದರೇ ನಾಯಕತ್ವ ಬದಲಿಸಿ’ : ಗಂಭೀರ್
ಅಬುಧಾಬಿ : ಪ್ರತಿ ಬಾರಿಯಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರಿಗೈಯಲ್ಲಿ ಐಪಿಎಲ್ ನಿಂದ ಹೊರಬಿದ್ದಿದೆ. ಈ ಸಲ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಿಂದ ಟೂರ್ನಿ ಆರಂಭಿಸಿದ್ದ ಆರ್ ಸಿಬಿ ತಂಡ ಪ್ಲೇ ಆಪ್ ನಲ್ಲಿ ಸೋಲುಂಡು ನಿರಾಸೆ ಅನುಭವಿಸಿದೆ.
ಇತ್ತ ಈ ಸಲ ಕಪ್ ನಮ್ಮದೇ ಎಂದು ಬೀಗುತ್ತಿದ್ದ ಆರ್ ಸಿಬಿಯನ್ಸ್ ನಿನ್ನೆ ಬೆಂಗಳೂರು ತಂಡ ಸೋಲುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಂಡದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಈ ಮಧ್ಯೆ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಆರ್ ಸಿಬಿ ಐಪಿಎಲ್ ಕಪ್ ಗೆಲ್ಲಬೇಕಿದ್ದರೇ ಈ ಬದಲಾವಣೆ ಅನಿವಾರ್ಯ ಎಂದು ಸಲಹೆ ನೀಡಿದ್ದಾರೆ.
ಖಾಸಗಿ ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಐಪಿಎಲ್ ಕೂಟದಲ್ಲಿ ಇದುವರೆಗೆ ಎಂಟು ಬಾರಿ ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ಇದುವರೆಗೂ ಒಂದೂ ಕಪ್ ಗೆದ್ದಿಲ್ಲ. ಹೀಗಾಗಿ ಆರ್ ಸಿಬಿಯ ನಾಯಕತ್ವವನ್ನು ವಿರಾಟ್ ತ್ಯಜಿಸಬೇಕು ಎಂದು ಹೇಳಿದ್ದಾರೆ.
ಎಂಟು ಬಾರಿ ಆರ್ ಸಿಬಿ ನಾಯಕನಾಗಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದಾದರೆ ನಾಯಕನೇ ಜವಾಬ್ದಾರಿ ಹೊರಬೇಕು.
ಎಂಟು ವರ್ಷದಷ್ಟು ದೊಡ್ಡ ಸಮಯವನ್ನೇ ಫ್ರಾಂಚೈಸಿ ನೀಡಿದೆ. ಇಷ್ಟು ವರ್ಷ ತಂಡದ ನಾಯಕನಾಗಿ ಬೇರೆ ಯಾವ ನಾಯಕನಿದ್ದಾನೆ..? ಯಾವ ಆಟಗಾರ ಕಪ್ ಗೆಲ್ಲಲಾಗದೇ ಇಷ್ಟು ಸಮಯ ಒಂದೇ ತಂಡದಲ್ಲಿದ್ದಾನೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಿನ್ನೆ ಅಬುಧಬಿಯಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಎಸ್ ಆರ್ ಹೆಚ್ ತಂಡದ ವಿರುದ್ಧ ಆರ್ ಸಿಬಿ ಆರು ವಿಕೆಟ್ ಅಂತರದ ಸೋಲನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಹೈದರಾಬಾದ್ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಗೆಲುವು ಸಾಧಿಸಿತು.