ಪ್ರಿಯ ಓದುಗ ದೊರೆಯೇ ಸದ್ಯ ಪ್ರಪಂಚದಲ್ಲಿ ಕೊರೊನಾ ಎಂಬ ವೈರಸ್ ರುದ್ರನರ್ತನ ಮಾಡುತ್ತಿದೆ. ಈ ಕೊರೊನಾಸುರನ ಭೀಕರತೆಗೆ ಕೋಟ್ಯಾಂತರ ಜನರ ಬದುಕು ಬರ್ಬಾದ್ ಆಗಿಹೋಗಿದೆ. ಅದೆಷ್ಟೋ ಜನರು ಕೆಲಸ ಕಳೆದುಕೊಂಡು ಮನೆಯಲ್ಲಿ ಕೂತಿದ್ದಾರೆ. ಇನ್ನು ಈ ಸಾಂಕ್ರಾಮಿಕ ಹೆಮ್ಮಾರಿ ವೈರಸ್‌ಗೆ ಇದುವರೆಗೂ 10 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈಗ ನಮ್ಮ ದೇಶದಲ್ಲೂ ಈ ಕಿಲ್ಲರ್ ಕೊರೊನಾ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದ್ದು,ಇಲ್ಲಿಯವರೆಗೂ 500 ಮಂದಿಗೆ ಈ ಸೋಂಕು ತಗುಲಿದೆ.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೇ ಈ ಕಿಲ್ಲರ್ ಕೊರೊನಾ ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಸೋಂಕಿನಿಂದ ರಕ್ಷಿಸಿಕೊಳ್ಳಲು ಜನರು ಹಲವು ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಈ ಸೋಂಕು ಎಟಿಎಂಗಳಿಂದಲೂ ಹರಡುವ ಸಾಧ್ಯತೆಗಳಿವೆ. ಯಾಕಂದ್ರೆ ಕೊರೊನಾ ಸೋಂಕು ತಡೆಗೆ ಎಟಿಎಂಗಳಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಕನಿಷ್ಠ ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಿಲ್ಲದ ಕಾರಣ ಸೋಂಕು ಹರಡುವ ಸಾಧ್ಯತೆ ಇದೆ.
ವೈರಸ್ ಹರಡುವ ಕಾರಣ ಹಲವು ಕಚೇರಿ, ಕಂಪನಿಗಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕೈಬಿಡಲಾಗಿದೆ. ಆದರೆ ಎಟಿಎಂಗಳಲ್ಲಿ ಜನ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೋಂಕಿತ ವ್ಯಕ್ತಿ ಎಟಿಎಂನಲ್ಲಿ ಹಣ ಪಡೆದುಕೊಂಡು ಹೋದರೆ ಅಪಾಯ ಗ್ಯಾರಂಟಿ. ಎಟಿಎಂನಲ್ಲಿ ಹಣ ಪಡೆಯಲು ಕನಿಷ್ಠ 10 ಸಲ ಟಚ್ ಮಾಡಬೇಕಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.








