ಬೆಂಗಳೂರು: ಬೆಳಗಾವಿ, ಕಾರವಾರ ನಮ್ಮದು ಎಂದಿರುವ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಾಠಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಸೇರಿದ ಅಖಂಡ ಮಹಾರಾಷ್ಟ್ರದ ಅಭಿವೃದ್ಧಿ ಬಾಳಾ ಠಾಕ್ರೆಯವರ ಕನಸಾಗಿತ್ತು. ಅದನ್ನ ನಾವು ನನಸು ಮಾಡಬೇಕು ಎಂದು ಅಜಿತ್ ಪವಾರ್ ಕರೆ ನೀಡಿದ್ದಾರೆ.

ಅಜಿತ್ ಪವಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಗಡಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಇದು ಖ್ಯಾತೆ ತೆಗೆಯುವಂಥಹ ಹೇಳಿಕೆ. ಇಂತಹ ಹೇಳಿಕೆಗಳನ್ನ ನಾವು ಸಹಿಸುವುದಿಲ್ಲ ಎಂದರು. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬುದು ಜಗತ್ತಿಗೆ ಗೊತ್ತಿದೆ. ಅನಗತ್ಯವಾಗಿ ಉದ್ಧಟತನದ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮರಾಠ ಅಭಿವೃದ್ದಿ ನಿಗಮ ವಿರೋಧಿಸಿ ಡಿಸೆಂಬರ್ 5ರಂದು ಬಂದ್‍ಗೆ ಕರೆ ನೀಡಿರುವ ವಿಚಾರವಾಗಿ ಎಚ್ಚರಿಕೆ ನೀಡಿದ ಬಿಎಸ್‍ವೈ, ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ. ಮರಾಠಿಗರು ನಮ್ಮ ರಾಜ್ಯದ ಕನ್ನಡಿಗರೇ. ಇದು ಮರಾಠ ಸಮುದಾಯದ ಅಭಿವೃದ್ಧಿಗೆ ಮಾಡಿರುವ ಪ್ರಾಧಿಕಾರ ಎಂದರು.
ಮರಾಠ ಅಭಿವೃದ್ಧಿ ನಿಗಮ ಮಾಡಿರುವ ಉದ್ದೇಶ ಅರ್ಥಮಾಡಿಕೊಳ್ಳಬೇಕು. ಮರಾಠರು ಕರ್ನಾಟಕದಲ್ಲೇ ಇರುವವರು. ಅವರು ಹಿಂದುತ್ವವಾದಿಗಳು. ಹಾಗಾಗಿ ಮರಾಠ ಅಭಿವೃದ್ದಿ ನಿಗಮ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಇನ್ನು ಈ ಬಾರಿ ಬೆಂಗಳೂರಿನಲ್ಲೇ ವಿಧಾನಸಭಾ ಅಧಿವೇಶನ ನಡೆಸಲಾಗುತ್ತದೆ, ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








