ಒಂದು ಹೆಸರು… ಭಾರತೀಯ ಕ್ರಿಕೆಟ್ ರಂಗಕ್ಕೆ ಹೊಸ ಆಯಾಮ ರೂಪಿಸಿದ್ದ ಹೆಸರು..
ಆ ಒಂದು ಹೆಸರು… ಕೋಟಿ ಕೋಟಿ ಅಭಿಮಾನಿಗಳಿಗೆ ಸ್ಪೂರ್ತಿ ತುಂಬಿದ ಹೆಸರು..
ಆ ಒಂದು ಹೆಸರು… ವಿಶ್ವ ಕ್ರಿಕೆಟ್ ನಲ್ಲಿ ಯಾರು ಅಳಿಸಲಾಗದಂತಹ ಶಾಶ್ವತವಾದ ಹೆಸರು…
ಆ ಒಂದು ಹೆಸರು… ಯುವ ಕ್ರಿಕೆಟಿಗರಿಗೆ ಮತ್ತು ಯುವ ನಾಯಕರಿಗೆ ದಾರಿದೀಪವಾಗುವ ಹೆಸರು
ಆ ಒಂದು ಹೆಸರು… ನೋಡಿದ ತಕ್ಷಣವೇ ಪ್ರತಿಯೊಬ್ಬರ ನಾಲಗೆ ಮೇಲೆ ನಲಿದಾಡುವ ಹೆಸರು…
ಆ ಹೆಸರೇ… ಮಹೇಂದ್ರ ಸಿಂಗ್ ಧೋನಿ… ಎಂ.ಎಸ್. ಧೋನಿ.. ಇದು ಬರೀ ಹೆಸರು ಅಲ್ಲ..
ಯಾಕಂದ್ರೆ ಆ ಹೆಸರಲ್ಲಿದೆ ಅಷ್ಟೊಂದು ಆಗಾಧವಾದ ಶಕ್ತಿ… ಅದರಲ್ಲಿದೆ ಯಾರು ಊಹಿಸದ ಯುಕ್ತಿ… ಆ ಹೆಸರಿನಿಂದಲೇ ಸಿಗುತ್ತಿದೆ ಸದಾ ಸ್ಫೂರ್ತಿ…
ಕ್ರಿಕೆಟ್ ಅಭಿಮಾನಿಗಳಿಗೆ ಆ ಹೆಸರಿನ ಮೇಲಿದೆ ಅಚ್ಚಳಿಯದ ಪ್ರೀತಿ… ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸುತ್ತಿದೆ ಆ ಹೆಸರಿನ ಕೀರ್ತಿ.
ಜುಲೈ 7… ಜೆರ್ಸಿ ನಂಬರ್ -7…ನಂಬರ್ -7… ಇದು ಮಹೇಂದ್ರ ಸಿಂಗ್ ಧೋನಿಯವರ ಟ್ರೇಡ್ ಮಾರ್ಕ್. ಮಾಡೆಲ್ ನಂಬರ್ 1981.
ಗೂಟ ರಕ್ಷಕನಾಗಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಎಂಎಸ್‍ಡಿ, ಸ್ಫೋಟಕ ಬ್ಯಾಟಿಂಗ್ ಮೂಲಕವೂ ಮಿಂಚು ಹರಿಸಿದ್ರು.
ಟೀಮ್ ಇಂಡಿಯಾವನ್ನು ಸೇರಿ ಮೂರೇ ಮೂರು ವರ್ಷದಲ್ಲಿ ನಾಯಕನಾಗಿ ಬಡ್ತಿ ಪಡೆದ ಧೋನಿ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಇತಿಹಾಸ ಬರೆದ್ರು.
ನಂತರ ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಟೀಮ್ ಇಂಡಿಯಾವನ್ನು ಯಶಸ್ವಿನ ಅಲೆಯಲ್ಲಿ ತೇಲಾಡಿಸಿದ್ರು. 2011ರ ವಿಶ್ವಕಪ್ ಫೈನಲ್ ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ರು.
ಗೆಲುವಿನ ರನ್ ಗಾಗಿ ಆಕರ್ಷಕ ಸಿಕ್ಸರ್ ಸಿಡಿಸಿದ್ರು. ಆಗಸದೆತ್ತರದಲ್ಲಿ ಹಾರಾಡುತ್ತಿದ್ದ ಚೆಂಡು ಸೀದಾ ಪ್ರೇಕ್ಷಕರ ಗ್ಯಾಲರಿಯತ್ತ ಬೀಳುತ್ತಿದ್ದ ಕ್ಷಣವನ್ನು ತನ್ನ ತೀಕ್ಷ್ಣ ಕಣ್ಣಿನಿಂದಲೇ ನೋಡುತ್ತಿದ್ದ ಆ ಕ್ಷಣ…
ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಗೆಲುವಿನ ಸಂಭ್ರಮವನ್ನು ಆಚರಿಸಿದ್ದರು ಧೋನಿ. ಇನ್ನು ಐಪಿಎಲ್‍ನಲ್ಲಂತೂ ಧೋನಿಯ ಮ್ಯಾಜಿಕ್ ಅನ್ನು ಕೇಳುವುದೇ ಬೇಡ.
ತನ್ನ ಸ್ಫೊಟಕ ಆಟ, ಚಾಣಕ್ಯ ನಾಯಕತ್ವ, ತಾಳ್ಮೆಯಿಂದಲೇ ಎಲ್ಲವನ್ನು ಸಹಿಸಿಕೊಂಡು ತಂಡವನ್ನು ಮುನ್ನಡೆಸುವ ರೀತಿ, ಕ್ಷಣ ಮಾತ್ರದಲ್ಲೇ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಮಾಸ್ಟರ್ ಮೈಂಡ್, ಆಟದ ಜೊತೆ ಫ್ಯಾಷನ್, ಪ್ಯಾಷನ್, ಸ್ಟೈಲ್, ದೇಶಾಭಿಮಾನ…
ಸೈನಿಕರ ಮೇಲಿನ ಗೌರವ ಹೀಗೆ ಮುಗುಳುನಗೆಯಿಂದಲೇ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವದಿಂದ ಧೋನಿ ಮನೆ ಮನೆ ಮಾತಾಗಿದ್ದಾರೆ









