ಟ್ವೆಂಟಿ ಟ್ವೆಂಟಿಯ ಟಿ-20ಯಲ್ಲಿ ಟೀಮ್ ಇಂಡಿಯಾ ಸೂಪರ್..!
2020ನೇ ವರ್ಷ… ಅತ್ಯಂತ ಕೆಟ್ಟ ವರ್ಷ.. ಮಹಾಮಾರಿ ಕೊರೋನಾದಿಂದಾಗಿ 2020ನೇ ವರ್ಷವನ್ನು ಶೂನ್ಯ ವರ್ಷ ಅಂತನೇ ಕರೆಯಬಹುದು. ಜನರ ಬದುಕನ್ನು ಅಲ್ಲೋಲಕಲ್ಲೋಲವಾಗಿಸಿರುವ ವರ್ಷವೂ ಹೌದು.
ಎಲ್ಲರಿಗೂ ಗೊತ್ತಿರುವ ಹಾಗೇ 2020ರಲ್ಲಿ ಇಡೀ ಜಗತ್ತೇ ನಿಶಬ್ಧವಾಗಿತ್ತು. ಲಾಕ್ ಡೌನ್, ಕೊರೋನಾ ಭಯದಿಂದ ಜನರು ಹೊರಗಡೆ ಬರಲು ಹೆದರುತ್ತಿದ್ದರು. ಆರ್ಥಿಕ ಮತ್ತು ಮಾನಸಿಕವಾಗಿ ಮನುಕುಲಕ್ಕೆ ಭಾರೀ ನಷ್ಟವನ್ನುಂಟು ಮಾಡಿರುವ ವರ್ಷ ಕೂಡ .
ಅಂದ ಹಾಗೇ ಎಲ್ಲಾ ಕ್ಷೇತ್ರದಂತೆ ವಿಶ್ವ ಕ್ರಿಕೆಟ್ ಕೂಡ ಸುಮಾರು ಆರೇಳು ತಿಂಗಳು ಸ್ತಬ್ದವಾಗಿತ್ತು. ಈ ನಡುವೆ, ಟೀಮ್ ಇಂಡಿಯಾ 2020ರ ಟಿ-ಟ್ವೆಂಟಿ ಪಂದ್ಯಗಳಲ್ಲಿ ಅದ್ಭುತ ಸಾಧನೆಯನ್ನೇ ಮಾಡಿದೆ.
2020ರಲ್ಲಿ ಆಡಿರುವ ಮೂರು ಟಿ-20 ಸರಣಿಗಳನ್ನು ಸತತವಾಗಿ ಗೆದ್ದು ದಾಖಲೆ ಬರೆದಿದೆ.
ಕೊರೋನಾ ಮಹಾಮಾರಿ ಆವರಿಸಿಕೊಳ್ಳುವುದಕ್ಕಿಂತ ಮುನ್ನವೇ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತ್ತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ಬಳಿಕ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ-ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.
2020ರಲ್ಲಿ ಒಟ್ಟು 11 ಟಿ-20 ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾ ಸತತ 9 ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡ್ರೆ, 11ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಟೀಮ್ ಇಂಡಿಯಾದ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಮುಂದಿನ ದಿನಗಳಲ್ಲಿ ಭಾರತ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾ ದೇಶದ ವಿರುದ್ಧ ಟಿ-20 ಸರಣಿಗಳನ್ನು ಆಡಲಿದೆ. ಹೀಗಾಗಿ ಟೀಮ್ ಇಂಡಿಯಾ ಸತತ ಐದು ಸರಣಿಗಳನ್ನು ಗೆಲ್ಲುವತ್ತ ಚಿತ್ತವನ್ನಿಟ್ಟಿದೆ.








