ಬಿಬಿಎಂಪಿ ಶಾಲೆಗಳ ಸ್ಥಿತಿ ಗತಿ ಅಧ್ಯಯನಕ್ಕೆ ಆಮ್ ಆದ್ಮಿ ಪಕ್ಷದಿಂದ ಸಮಿತಿ ರಚನೆ
ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ, ಶಾಲೆಗಳನ್ನು ಭೂತ ಬಂಗಲೆಗಳಾಗಿ ಪರಿವರ್ತಿಸಿರುವ ಸರ್ಕಾರ ಹಾಗೂ ಬಿಬಿಎಂಪಿ ಕಾರ್ಯವೈಖರಿಯನ್ನು ಬಯಲು ಮಾಡಲು ಆಮ್ ಆದ್ಮಿ ಪಕ್ಷದಿಂದ ಸಮಿತಿ ರಚನೆ ಮಾಡಲಾಗಿದೆ.
ಈ ಸಮಿತಿಯು ಎಲ್ಲಾ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ ಎಂದು ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಮಾಹಿತಿ ನೀಡಿದರು.
ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರ ಯೋಜನಾ ತಜ್ಞ ಅಶ್ವಿನ್ ಮಹೇಶ್ ಅವರ ಮಾರ್ಗದರ್ಶನದಲ್ಲಿ, ಮುಖ್ಯ ವಕ್ತಾರ ಶರತ್ ಖಾದ್ರಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 91 ಶಿಶುವಿಹಾರ, 15 ಪ್ರಾಥಮಿಕ ಶಾಲೆಗಳು, 32 ಪ್ರೌಡ ಶಾಲೆಗಳು, 4 ಪದವಿ, 2 ಸ್ನಾತಕೋತ್ತರ ಪದವಿ ಸೇರಿ ಒಟ್ಟು 159 ಶಿಕ್ಷಣ ಸಂಸ್ಥೆಗಳು ಇವೆ. ಇವುಗಳನ್ನು ವಿಭಾಗವಾರು ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಹೇಳಿದರು.
ಇಲ್ಲಿದೆ ಹೊಸ ಸಂಸತ್ ಭವನದ ಇಂಚಿಂಚು ಮಾಹಿತಿ..
ಆಮ್ ಆದ್ಮಿ ಪಕ್ಷದ ನಿಯೋಗ ಇಂತಹ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯ, ಕಲಿಕಾ ವಾತಾವರಣ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೇಗಿದೆ ಹಾಗೂ ಶಿಕ್ಷಕರ ಭೋದನಾ ಸಾಮರ್ಥ್ಯದ ಬಗ್ಗೆ ಸಮೀಕ್ಷೆ ನಡೆಸಲಿದೆ.
ಈ ಶಾಲೆಗಳ ಅಭಿವೃದ್ಧಿಗೆ ಕಳೆದ 10 ವರ್ಷಗಳಲ್ಲಿ ಖರ್ಚು ಮಾಡಿರುವ ಹಣ, ಅನುದಾನ, ದಾನಿಗಳ ನೆರವು ಸೇರಿದಂತೆ ಯಾವ, ಯಾವ ಮೂಲದಿಂದ ಹಣಕಾಸಿನ ಸಹಾಯ ದೊರೆತಿದೆ ಎನ್ನುವುದನ್ನು ಸಹ ಅಧ್ಯಯನ ಮಾಡಲಾಗುವುದು.
ಇದೆಲ್ಲದಕ್ಕಿಂತ ಮುಖ್ಯವಾಗಿ ಬಿಬಿಎಂಪಿ ಶಾಲೆಗಳಿಗೆ ಬರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪೋಷಕರ ಹಾಗೂ ಮಕ್ಕಳಿಗೆ ಶಾಲೆಯ ಸ್ಥಿತಿಗತಿಗಳ ಬಗ್ಗೆ ಪ್ರಶ್ನೋತ್ತರಗಳನ್ನು ಕೇಳಿ ಪಡೆಯಲಾಗುವುದು ಹಾಗೂ ಶಿಕ್ಷಕರ ಪೋಷಕರ ನಡುವಿನ ಬಾಂಧವ್ಯ, ಕಳೆದ ಹತ್ತು ವರ್ಷಗಳಲ್ಲಿ ಶಾಲೆಯ ಫಲಿತಾಂಶ, ಹಾಜರಾತಿ, ನೂತನ ಕಲಿಕಾ ವಿಧಾನಗಳ ಅಳವಡಿಕೆ ಮಾಡಲಾಗಿದೆಯೇ, ಗ್ರಂಥಾಲಯ, ಆಟದ ಮೈದಾನ, ಪಠ್ಯೇತರ ಚಟುವಟಿಕೆಗಳು, ಕಲಿಕಾ ಸಾಧನಗಳು, ಲ್ಯಾಬ್, ಕಂಪ್ಯೂಟರ್ ಶಿಕ್ಷಣ, ಇತರೇ ಕೌಶಲಗಳಿಗೆ ಹೇಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎನ್ನುವುದನ್ನು ಈ ಸಮಿತಿ ಅಧ್ಯಯನ ನಡೆಸಲಿದೆ ಎಂದರು.
ಯಾರ ಒತ್ತಡಕ್ಕೆ ಒಳಗಾಗಿ ಅತ್ಯಂತ ಮೂಲಭೂತ ಅವಶ್ಯಕತೆಯಾದ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ ಜನ ಸಾಮಾನ್ಯರಿಗೆ ಸುಲಭವಾಗಿ ಎಟಕುವಂತಹ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎನ್ನುವುದೇ ನಮ್ಮ ಮುಂದಿರುವ ಪ್ರಶ್ನೆ.
ಅತ್ಯುತ್ತಮವಾಗಿದ್ದ ನಮ್ಮ ಕರ್ನಾಟಕದ ಶಿಕ್ಷಣ ವ್ಯವಸ್ಥೆ ರಾಜಧಾನಿಯಲ್ಲೇ ಕೊಳೆಯುತ್ತಾ ಇದೆ. ಬೆಂಗಳೂರಿನ ಅನೇಕ ಶಾಲೆಗಳು ಹಂದಿ ಗೂಡಿಗಿಂತ ಕಡೆಯಾಗಿವೆ.
ಕೆಲವು ಶಾಲೆಗಳನ್ನ ಖಾಸಗಿಯವರಿಗೆ ದತ್ತು ಕೊಟ್ಟು ಸರ್ಕಾರ ಹಾಗೂ ಬಿಬಿಎಂಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಸರ್ಕಾರಿ ಶಾಲೆಗಳ ಜಾಗಗಳನ್ನು ಕಬಳಿಸಲಾಗಿದೆ, ಬೇಕಂತಲೇ ಹಾಳು ಗೆಡವಲಾಗಿದೆ ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎಂದು ಕಿಡಿ ಕಾರಿದರು.
ಪತ್ರಿಕಾ ಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷ ಬೆಂಗಳೂರು ಯುವ ಘಟಕದ ಅಧ್ಯಕ್ಷ ಚಿನ್ಮಯ್ ನಾಡಿಗ್ ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









