ADVERTISEMENT
Sunday, June 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಕೊಡಚಾದ್ರಿಯ ದೈವಿಕ ಪರಿಸರ, ಕೊಲ್ಲೂರಿನ ಮೌನ ಕಾಡು, ಸೌಪರ್ಣಿಕಾ ತಟದ ಮೂಕಾಂಬಿಕೆಯ ಧ್ಯಾನದ ಅನುಭವ ಮತ್ತು ಅನುಭಾವಿಗಳು:-

Shwetha by Shwetha
December 10, 2020
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Kodachadri
Share on FacebookShare on TwitterShare on WhatsappShare on Telegram

ಕೊಡಚಾದ್ರಿಯ ದೈವಿಕ ಪರಿಸರ, ಕೊಲ್ಲೂರಿನ ಮೌನ ಕಾಡು, ಸೌಪರ್ಣಿಕಾ ತಟದ ಮೂಕಾಂಬಿಕೆಯ ಧ್ಯಾನದ ಅನುಭವ ಮತ್ತು ಅನುಭಾವಿಗಳು:-

(“ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಲ್ಲಿ ಕೇಬಲ್ ಕಾರ್ ವೈರ್ ಎಳೆಯಲು ಮೊದಲ ಮರ ಕಡಿದ ದಿನ ಸರ್ವಜ್ಞ ಪೀಠದಲ್ಲಿ ತಪೋನಿರತ ಶಂಕರಾಚಾರ್ಯರ ಅವಿನಾಶಿ ಚೇತನ ಎದ್ದು ನಡೆಯುತ್ತದೆ”)
Kodachadri

Related posts

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

June 21, 2026
ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಎಚ್‌ಡಿಕೆ ಎಂದ CM – ಮತ್ತೆ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ: ಎಚ್‌ಡಿಕೆ ಮತ್ತು ಬಿಎಸ್‌ವೈಗೆ ಡಿಕೆಶಿ ಕೊಟ್ಟ ಆ ಒಂದು ಖಡಕ್ ಎಚ್ಚರಿಕೆ ಏನು?

June 21, 2026

‌ನಾನು ಸಾಗರದಲ್ಲಿದ್ದ ಸಂದರ್ಭದಲ್ಲಿ ಕೊಲ್ಲೂರಿಗೆ ಅಥವಾ ಶೃಂಗೇರಿಗೆ ಹೋಗುವುದೆಂದರೆ ಹೆಣ್ಣುಮಕ್ಕಳು ತವರಿಗೆ ಹೋಗುವಂಥ ಸಂಭ್ರಮದಂತೆಯೇ ನನಗೆ. ಕೊಲ್ಲೂರು ಈಗಲೂ ನನ್ನ ಅಂತರಂಗದ ಒಂದು ಪ್ರಮುಖ ಭಾಗದಲ್ಲಿ ನೆಲೆಯಾಗಿದೆ. ಅಲ್ಲೆಲ್ಲೋ ಸಣ್ಣ ತುಂಡು ಭೂಮಿಯಲ್ಲಿ ತರಕಾರಿ, ಹಣ್ಣು, ಹೂಗಳ ತೋಟವನ್ನು ಮಾಡಿ, ಗುಡಿಸಲು ಕಟ್ಟಿಕೊಂಡು, ಆಧ್ಯಾತ್ಮದ ಚಿಂತನೆ ಮಾಡುತ್ತಾ, ಸಾಹಿತ್ಯ ಓದುತ್ತಾ ಉಳಿದಾಯುಷ್ಯ ಕಳೆದುಬಿಟ್ಟರೇ ಸತ್ತ ನಂತರ ನೇರ ಸ್ವರ್ಗ ಪ್ರಾಪ್ತಿಯೇನೋ! ಎನ್ನುವ ಕಲ್ಪನೆ ಇಂದಿಗೂ ನನಗಿದೆ. ಈ ಪರಮದರಿದ್ರ, ಕೊಳಕು ಚರಂಡಿ, ಮಹಾನಗರಿಯ ಶುದ್ಧ ಯಾಂತ್ರಿಕ, ನಿರರ್ಥಕ ಬದುಕಿಗಿಂತ ಕೊಲ್ಲೂರು, ಶೃಂಗೇರಿಯಂತಹ ಆಧ್ಯಾತ್ಮಿಕ ಭೂಮಿಯಲ್ಲಿ ಬಡತನದಲ್ಲಿ ಬದುಕುವ ಬಾಳೇ ಸರ್ವೋತ್ತಮ ಅನ್ನುವುದು ನನ್ನ ಈವರೆಗಿನ ಅನಿಸಿಕೆ.
Kodachadri kolluru

ಕೊಲ್ಲೂರಿನಲ್ಲೇ ನಾನು ಮೊದಲು ಸಂಕಲ್ಪ ಮಾಡಿದ್ದು ನಾನು ಪತ್ರಕರ್ತನಾಗುತ್ತೇನೆ ಎಂದು. ಕೊಲ್ಲೂರಿನಲ್ಲೇ ಹರಸಿಕೊಂಡಿದ್ದು ಅವಳು ನಿಜವಾಗಿಯೂ ನನ್ನ ಪ್ರೀತಿಸುತ್ತಾಳೆಂದರೆ ನಿನ್ನ ಸಮ್ಮುಖದಲ್ಲೇ ಅವಳಿಗೆ ತಾಳಿ ಕಟ್ಟುತ್ತೇನೆ ಎಂದು. ಕೊಲ್ಲೂರಿನಲ್ಲೇ ನಾನು ಗಟ್ಟಿ ಮನಸಿನಲ್ಲಿ ನಿರ್ಧಾರ ಮಾಡಿದ್ದು ಬದುಕಿದರೇ ಹೀಗೇ ಬದುಕುತ್ತೀನಿ; ನಾನು ಆದರ್ಶಗಳನ್ನು ತೊರೆದ ದಿನ ನಿನ್ನ ಮುಖ ನೋಡಲಾರೆ ಎಂದು. ಕೊಲ್ಲೂರಿನಲ್ಲೇ ನಾನು ಮೊದಲ ಬಾರಿ ನನ್ನಿಷ್ಟದ ಗಂಧರ್ವ ಗಾಯಕ ಯೇಸುದಾಸ್ ರನ್ನು ಕಣ್ತುಂಬುವಷ್ಟು ಕಂಡು, ಕೈ ಮುಟ್ಟಿ ರೋಮಾಂಚಿತನಾಗಿದ್ದು (ಅಂದು ಅವರ ಜನ್ಮದಿನ. ಅವರ ಪ್ರತೀ ಜನ್ಮದಿನದಂದು ಅವರು ಕೊಲ್ಲೂರಿಗೆ ಬರುತ್ತಾರೆ). ನನಗೊಬ್ಬರು ವಿಶಿಷ್ಟ ಸ್ವಭಾವದ ಅವಧೂತ ಗುರುಗಳು ಸಿಕ್ಕಿದ್ದು ಕೊಡಚಾದ್ರಿಯ ತಪ್ಪಲಿನಲ್ಲೇ. ಈಗಲೂ ವರ್ಷದಲ್ಲಿ ಒಂದು ಬಾರಿ ಎಲ್ಲಾದರೂ ಸಿಗುತ್ತಾರವರು. ನನಗೆ ಪೂರ್ತಿ 21 ದಿನಗಳ ದೀಪತ್ರಾಟಕ ಹೇಳಿಕೊಟ್ಟವರು ಅವರು. ಇಂತಹ ಕಾರಣಗಳಿಂದಲೇ ಕೊಲ್ಲೂರು ಮತ್ತು ಕೊಡಚಾದ್ರಿ ಎಂದರೆ ನನಗೆ ಪ್ರಾಣಪ್ರಿಯ ತಾಣಗಳು.

ಆ ಕೊಲ್ಲೂರು ಅದರ ಬೆನ್ನಲ್ಲಿ ಹಬ್ಬಿದ ಮೂಕಾಂಬಿಕಾ ರಿಸರ್ವ್ ಫಾರೆಸ್ಟ್, ಮೂಕಾಂಬಿಕೆ ಮೂಗಿನ ನೇರದಲ್ಲಿ ಒಂದೆರಡು ಹರದಾರಿ ದೂರದ ಕೊಡಚಾದ್ರಿ, ಮಲೆಯಾಳಿಗಳ ಟೀಅಂಗಡಿ, ಪ್ರತೀ ಅಂಗಡಿಗಳ ಮುಂದೆ ಕೇಳಿಸುವ ಅದ್ಭುತ ಭಕ್ತಿಗೀತೆಗಳ ನಾದಲಹರಿ, ಅಲ್ಲೇ ಕೊಲ್ಲೂರಿನ ಮೊಣಕಾಲಿನಲ್ಲಿ ನಿಶ್ಯಬ್ಧವಾಗಿ ಹರಿವ ಸೌಪರ್ಣಿಕೆ!! ಕೊಲ್ಲೂರು ಎಂತಹ ನಾಸ್ತಿಕರನ್ನು ಆಸ್ತಿಕರನ್ನಾಗಿಸುವ ಗುಣವುಳ್ಳ ಊರು. ಕೊಡಚಾದ್ರಿಯ ಹಚ್ಚಹಸುರಿಮ ಚಾದರ ಹೊದ್ದ ಗಿರಿಶೃಂಗಗಳು ನಿಜಕ್ಕೂ ದೈವಿಕ. ಭಗವಂತ ಇದ್ದಿದ್ದೇ ಹೌದಾದರೆ ಅಲ್ಲಿ ಮಾತ್ರ ನಿರ್ಗುಣ ನಿರಾಕಾರ ಸ್ವರೂಪನಾಗಿ ನೆಲೆಸಿರಬಹುದು ಎನ್ನುವ ನಂಬಿಕೆ ನನ್ನದು.
Kodachadri

ಬೆಳ್ಳಂಬೆಳಿಗ್ಗೆ ಗಜಾನನ ಸಾರಿಗೆ ಸರ್ವೀಸ್ ನ ಸೌಪರ್ಣಿಕ ಬಸ್ ಹತ್ತಿ ಕೊಲ್ಲೂರಿಗೆ ಹೊರಟು, ಶರಾವತಿ ಹಿನ್ನೀರಿನ ಲಾಂಚ್ ನಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ಣ ಪಾಪೆಯಲ್ಲಿ ಸೆರೆ ಹಿಡಿದು, ಶುರು ಮಧ್ಯಾಹ್ನದ ಹೊತ್ತಿಗೆ ಕೊಲ್ಲೂರಿನಲ್ಲಿಳಿದರೇ ಕೈದೂರದಲ್ಲಿ ಕೈ ಬೀಸಿ ಕರೆಯುತ್ತಿತ್ತು ಸೌಪರ್ಣಿಕಾ ನದಿ.
ಅಲ್ಲೊಂದು ಬಂಡೆಯ ಮೇಲೆ ಕೊಂಚ ಹೊತ್ತು ಕುಳಿತಿದ್ದು ಕೊಲ್ಲೂರಿನ ಅಮ್ಮನ ಮನೆಯ ಜಗುಲಿ ದಾಟಿ, ಒಳ ಅಂಗಳಕ್ಕೆ ನಡೆದರೆ ಜಗತ್ತಿನ ಎಲ್ಲ ದಿವ್ಯಗಳು ಒಮ್ಮೆಲೇ ಗಾಳಿಯಲ್ಲಿ ಹಾರಿ ಬಂದು ಹೆಗಲ ಮೇಲೆ ಕೂತ ಅನುಭೂತಿ. ನಾನು ಮೂಕಾಂಬಿಕೆಗೆ ಕೈ ಮುಗಿದು ನಮಿಸಿದವಲ್ಲ. ಅವಳ ಮೂರ್ತಿಯನ್ನು ತದೇಕಚಿತ್ತದಲ್ಲಿ ಅರೆಘಳಿಗೆ ಕಂಡು ಮೌನದಲ್ಲಿ ಸಂವಹಿಸಿದವನು. ಅವಳು ನನ್ನ ಆಧ್ಯಾತ್ಮಿಕ ಪ್ರಜ್ಞೆಯೊಳಗೆ ನೆಲೆಯಾಗಿದ್ದ ತಾಯಿ. ಅವಳೊಂದಿಗೆ ನನಗೆ ಏಕವಚನದ ಸಲಿಗೆ ಇತ್ತು. ಬೇಸರಗೊಂಡಾಗ ಮನಸಾರೆ ಬಯ್ಯುವಷ್ಟು ಅಸಮಾಧಾನಗಳಿರುತ್ತಿತ್ತು. ಇದೆಲ್ಲಕ್ಕೂ ನೀನೇ ಕಾರಣ ಎಂದು ದೂರುವ ಸಿಟ್ಟಿತ್ತು. ಎಲ್ಲವನ್ನೂ ಮೀರಿದ ಅಕಾರಣ, ಅಲೌಕಿಕ ಪ್ರೀತಿ ಇತ್ತು. ಅವಳಿಗೆ ವರ್ಷಕ್ಕೊಂದು ಸೀರೆ ಕೊಟ್ಟರೆ ಅದೇನೋ ಸಮಾಧಾನ. ಅಮ್ಮ ಕೊಲ್ಲೂರಿಗೆಂದೇ ವರ್ಷಕ್ಕೊಂದು ಸೀರೆ ಆರಿಸಿ ತಂದು ಎತ್ತಿಟ್ಟು ಕಳಿಸುತ್ತಿದ್ದಳು. ಮಗನಂತೆ ತಾಯಿಗೊಂದು ವರ್ಷದ ಮುಡಿಪು ಸೀರೆ ಕೊಟ್ಟು, ನಡು ಮಧ್ಯಾಹ್ನ ಸರತಿ ಸಾಲಿನಲ್ಲಿ ತೆರಳಿ ಪಂಕ್ತಿ ಭೋಜನದಲ್ಲಿ ಪ್ರಸಾದದ ಅನ್ನ ಅದ್ಭುತ ಘಮದ ತಿಳಿಸಾರಿನೂಟ ಉಂಡು ಮತ್ತೆ ಬಸ್ ಹತ್ತಿ ಕಣ್ಮುಚ್ಚಿದರೆ ಎಂದೂ ಆವರಿಸದ ಸಮೃದ್ಧ ನಿದ್ದೆ. ಮತ್ತೆ ಸಾಗರ ತಲುಪುವ ತನಕ ನಿದ್ದೆ, ನಿದ್ದೆ ಮತ್ತು ನಿದ್ದೆ. ಆ ನಿದ್ದೆಯಲ್ಲಿ ಅವ್ಯಕ್ತವಾಗಿ ಗೋಚರವಾಗುತ್ತಿದ್ದ ಅಸ್ಪಷ್ಟ ಕನಸುಗಳು. ಅಂತಹ ನಿದ್ದೆ ಮತ್ತು ಅಂತಹ ಕನಸುಗಳು ಮತ್ತೆಲ್ಲೂ ಬರುತ್ತಲೇ ಇರಲಿಲ್ಲ.

Kodachadri

ಅಮ್ಮ ಕೊಲ್ಲೂರಿನ ಮೂಕಾಂಬಿಕೆಗೆ ಹರಕೆ ಹೊತ್ತ ಮೇಲೆಯೇ ನಾನು ಹುಟ್ಟಿದ್ದಂತೆ. ನಮ್ಮ ತ್ಯಾಗರ್ತಿಯ ಪಕ್ಕದಲ್ಲೊಂದು ಲಿಂಗಾಯಿತರ ಚಿಕ್ಕ ಮಠವಿದೆ. ವೀರಾಪುರ ಹಿರೇಮಠ ಎಂದು ಅದರ ಹೆಸರು. ಅಜ್ಜ ಬದುಕಿದ್ದ ಕಾಲದಿಂದಲೂ ನಮ್ಮ ಕುಟುಂಬ ವೀರಾಪುರ ಮಠದ ಆಗುಹೋಗುಗಳಲ್ಲಿ ಭಾಗೀದಾರರು. ಪಂಡಿತರಾಧ್ಯ ಚೆನ್ನವೀರ ಮರುಳಸಿದ್ಧ ದೇಶಿಕೇಂದ್ರ ಅಜ್ಜಯ್ಯನವರು ಎನ್ನುವ ತರುಣ ಸ್ವಾಮಿಗಳು ವೀರಾಪುರ ಮಠದ ಪೀಠಾಧಿಪತಿಗಳಾಗಿದ್ದರು. ಅದು ಆಗ ಅತ್ಯಂತ ಬಡ ಮಠ. ಒನ್ ಫೈನ್ ಡೇ ಅಜ್ಜಯ್ಯನವರು “ಪ್ರಭಣ್ಣ ಕೊಲ್ಲೂರಿಗೆ ಹೋಗಿಬರೋಣ ಬರ್ತೀಯಾ. ತಾಯಿಯನ್ನು ಕರ್ಕೊಂಡು ಬಾ” ಅಂದಿದ್ದರಂತೆ. ಆಗಿನ್ನೂ ಅಪ್ಪನ ಮದುವೆಯಾಗಿ ನಾಲ್ಕಾರು ತಿಂಗಳಾಗಿತ್ತಂತೆ. ಅಪ್ಪ ಅಮ್ಮ ಸ್ವಾಮಿಗಳ ಜೊತೆ ಕೊಲ್ಲೂರಿಗೆ ಹೊರಟರಂತೆ. ಅಲ್ಲಿ ಸೌಪರ್ಣಿಕೆಯಲ್ಲಿ ಮಿಂದು ಸ್ವಾಮಿಗಳ ಜೊತೆಯಲ್ಲೇ ಗರ್ಭಗುಡಿಯ ಒಳಗೆ ಹೋಗಿ ಮೂಕಾಂಬಿಕೆಯ ಸನಿಹ ನಿಂತೇ ಹರಕೆ ಸಲ್ಲಿಸಿದ್ದಳಂತೆ ಅಮ್ಮ. ಅದಾಯಿತಲ್ಲ ಆಮೇಲೆ ನಾನು ಅವತರಿಸಿದೆನಂತೆ. ಇದಿಷ್ಟು ನನ್ನ ಹುಟ್ಟಿನ ಹಿನ್ನೆಲೆ.

Kodachadri

ಆದರೆ ನಾನು ಬೆಳೆಯುವಾಗ ನನ್ನ ಕಿವಿಗೆ ಕೊಲ್ಲೂರಿನ ಕ್ಷೇತ್ರ ಮಹಾತ್ಮೆ ಬಿದ್ದಿರಲೇ ಇಲ್ಲ. ಅಪ್ಪನ ಕುಲದೈವ ಉಡುಪಿಯ ಅಂಬಲಪಾಡಿಯ ಮಹಾಂಕಾಳಿ. ಅಮ್ಮನ ಮೂಲ ಶೃಂಗೇರಿಯ ಶಾರದಮ್ಮ. ಮನೆಯಲ್ಲಿ ಈ ಇಬ್ಬರು ಹೆಣ್ಣುದೇವರದ್ದೇ ಅಧಿಪತ್ಯವಿತ್ತು. ಅದ್ಯಾವ ಕಾರಣಕ್ಕೆ ನಂಗೆ ಕೊಲ್ಲೂರಮ್ಮ ಮನಸಲ್ಲಿ ಕೂತಳೋ ಅವಳೇ ಹೇಳಬೇಕು. ನಂಗೆ ಶೃಂಗೇರಿಯ ಕರ್ಮಠತನಕ್ಕಿಂತ, ಅಲ್ಲಿನ ಬ್ರಾಹ್ಮಣರ ಶ್ರೇಷ್ಠತಾ ವ್ಯಸನಕ್ಕಿಂತ ಹೆಚ್ಚಾಗಿ ಕೊಲ್ಲೂರಿನ ಕಾಡಿನ ಜಾಡಿನ ಮೌನ ಇಷ್ಟವಾಗಿಬಿಟ್ಟಿತ್ತು. ಕೊಲ್ಲೂರು ಇಷ್ಟವಾಗುವ ಹೊತ್ತಿಗೆ ತೀರಾ ಆವರಿಸಿದ್ದು ಕೊಡಚಾದ್ರಿಯ ತುತ್ತತುದಿಯ ಸರ್ವಜ್ಞ ಪೀಠ ಮತ್ತು ಶಂಕರಾಚಾರ್ಯದ ಕರ್ಮಭೂಮಿಯ ಪ್ರಾಕೃತಿಕ ಅನನ್ಯ ಸೌಂದರ್ಯ.

ಶಂಕರರು ಯಾಕೆ ಈ ಭೂಮಿಯನ್ನೇ ತಪಸ್ಸಿಗೆ ಆರಿಸಿಕೊಂಡರು ಎಂಬ ಪ್ರಶ್ನೆಗೆ ನಿಮಗೆ ಉತ್ತರ ಬೇಕಿದ್ದರೇ ಆಗ ಹೋಗಬೇಕಿತ್ತು ಕೊಡಚಾದ್ರಿಗೆ. ನಾನು ಓದುವ ಸಮಯದಲ್ಲಿ ಕೊಡಚಾದ್ರಿಗೆ ಚಾರಣಕ್ಕೆ ಅಥವಾ ಪ್ರವಾಸಕ್ಕೆ ಬರುತ್ತಿದ್ದ ಜನರ ಸಂಖ್ಯೆ ತೀರಾ ಕಡಿಮೆ. ನಾನು ಪಿಯೂಸಿ ಓದುವಾಗ ಗೆಳೆಯ ದೀಪಕ್ ಹೆಗಡೆ ಯಾವತ್ತಾದರೂ ಒಂದಿನ ದುತ್ತನೆ ಎದುರಾಗಿ ಬಾ ಕೊಡಚಾದ್ರಿಗೆ ಹೋಗಣ ಅಂದುಬಿಡುತ್ತಿದ್ದ. ಯಾವುದೇ ಪೂರ್ವ ತಯಾರಿಯಿಲ್ಲದೇ ಉಟ್ಟ ಬಟ್ಟೆಯಲ್ಲಿ ಅವನ ಬೈಕ್ ಹತ್ತಿದರೆ ಕೊಡಚಾದ್ರಿಯ ತಪ್ಪಲಿನ ತನಕ ಒಂದೇ ಒಂದು ಮಾತಾಡದೇ ಹೋಗುತ್ತಿದ್ದೆವು. ಕೊಡಚಾದ್ರಿಗೆ ಹೋಗುವ ನಿರ್ಧಾರ ಮಾಡುತ್ತಿದ್ದ ಹಾಗೆ ನಮ್ಮಲ್ಲೊಂದು ಮಾಯೆ ಆವರಿಸಿಕೊಳ್ಳುತ್ತಿತ್ತು.

ಅವನ ಯಮಹಾ ಬೈಕ್ ಹತ್ತಲಾರದೇ ಏದುಸಿರು ಬಿಡುತ್ತಾ, ತೇಕುತ್ತಾ ಕೊಡಚಾದ್ರಿಯ ರಸ್ತೆಯಲ್ಲದ ತಗ್ಗು ದಿಣ್ಣೆಯ ರಸ್ತೆಯಲ್ಲೂ ಉಸ್ಸೋ ಎಂದು ಗೊರ್ರೋ ಎಂದು ಸದ್ದು ಮಾಡುತ್ತಾ ಏರುತ್ತಿತ್ತು. ನಡು ನಡುವೆ ಇಬ್ಬರಲ್ಲಿ ಒಬ್ಬರು ಇಳಿದು ಕೊಂಚ ದೂರ ನಡೆಯಬೇಕಾಗುತ್ತಿತ್ತು; ಮತ್ತೊಬ್ಬರು ಒಂದನೇ ಗೇರ್ ನಲ್ಲಿ ಗಾಡಿ ಚಲಾಯಿಸಬೇಕಿತ್ತು. ಈಗಿನಂತೆ ಆಗ ಅಲ್ಲಿ ಜೀಪ್ ಗಳಿರಲಿಲ್ಲ. ಹಾಗೂ ಹೀಗೂ ಮೇಲೇರಿಬಿಟ್ಟರೇ ಅದು ಸ್ವರ್ಗವೇ! ಮೋಡಗಳು ಬಳಿ ಬಂದು ಕೆನ್ನೆ ಚುಂಬಿಸಿ ಮುಂದೆ ಹೋಗುತ್ತಿದ್ದರೆ ತಾರುಣ್ಯದ ನಮ್ಮ ದೇಹಗಳು ರೋಮಾಂಚಿತಗೊಂಡು ನಡುಗುವಷ್ಟು ಶೀತಲ ರಮ್ಯ ನಿಸರ್ಗ ಚೆಲುವಿನ ದರ್ಶನ. ಅಲ್ಲಿನ ಮೋಡಗಳ ಸ್ಪರ್ಶದ ಪುಳಕವಿತ್ತಲ್ಲ? ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ!

Kodachadri

ಮಧ್ಯಾಹ್ನ 12 ಗಂಟೆಗೆ ತಲುಪಿ ದೀರ್ಘ 2 ಗಂಟೆ ನಾವು ಕೇವಲ ಮೇಘಸಂಭಾಷಣೆಯಲ್ಲಿ ಕುಳಿತುಬಿಡುತ್ತಿದ್ದೆವು. 2 ಗಂಟೆಯ ವೇಳೆಗಾಗಲೇ ಅಸಾಧ್ಯ ಹಸಿವು. ಸರ್ವಜ್ಞ ಪೀಠಕ್ಕೆ ಮೆಟ್ಟಿಲುಗಳು ಶುರುವಾಗುವ ಕೊಂಚ ಎಡಪಕ್ಕದಲ್ಲಿ ಒಬ್ಬರು ಭಟ್ಟರ ಮನೆ ಇತ್ತು. ಅದೇ ಅಲ್ಲಿನ ಹೋಟೆಲ್. ಅವರಿಗೆ ನಾವು ಬಂದು ಅಲ್ಲಿ ಮೈಮರೆತು ಕೂತ ವಿಚಾರ ಗೊತ್ತಾಗಿರುತ್ತಿತ್ತು. ಮೂರು ಹಿಡಿ ಅಕ್ಕಿ ಜಾಸ್ತಿ ಹಾಕಿ ಅನ್ನ ಮಾಡಿರುತ್ತಿದ್ದರು. ಒಂದೊಳ್ಳೆ ತಿಳಿಸಾರು, ತರಕಾರಿ ಸಾಂಬಾರಿನ ಜೊತೆ ಒಂದು ಪಲ್ಯವನ್ನೂ ಮಾಡಿಸಿರುತ್ತಿದ್ದರು. ಆವತ್ತು ನಮ್ಮ ಹಸಿವಿಗೂ ಭಟ್ಟರ ಮನೆಯ ಎಲೆ ತುಂಬ ಹರಡುವ ತರಹೇವಾರಿ ಮೆಲಾಗ್ರ ತುಂಬಿದ ಭೋಜನಕ್ಕೂ ಅವಿನಾಭಾವ ನಂಟು. ಭಟ್ಟರ ಮನೆಯಲ್ಲೇ ಹಾಕಿದ ಮಿಡಿಗಾಯಿ ಉಪ್ಪಿನಕಾಯಿಯ ಸಹಿತ ಬಡಿಸಿದ್ದೆಲ್ಲವೂ ಅಮೃತಸಮಾನವೇ. ಅಲ್ಲಿನ ಆ ಹೊತ್ತಿನ ಭೋಜನದ ಮುಂದೆ ಮತ್ಯಾವುದನ್ನೂ ಹೋಲಿಸಲು ಸಾಧ್ಯವಿಲ್ಲ.

ಒಂದು ಸಲ ಹೀಗೆ ಕೊಡಚಾದ್ರಿಗೆ ಹೋಗಲು ನಿರ್ಧರಿಸಿ ಹೊರಟೆವು. ಎಂದಿನ ಮೌನ, ಎಂದಿನ ಸಾಹಸ ಮತ್ತು ಮೇಲಿನ ಸ್ವರ್ಗ ಸಮಾನ ಪ್ರಕೃತಿಯಲ್ಲಿ ಕಳೆದಹೋದೆವು. ಹಸಿವು ಕರೆದಾಗ ಭಟ್ಟರ ಮನೆಯ ಬಾಗಿಲು ಬಡಿದೆವು. ನಮ್ಮ ದುರದೃಷ್ಟಕ್ಕೆ ಅಂದು ಅವರ ಮನೆಯವರು ಯಾರೂ ಇರಲಿಲ್ಲ. ಯಾವುದೋ ಮದುವೆ ಮನೆಗೆ ಹೋಗಿದ್ದರಂತೆ. ಅಸಾಧ್ಯ ಹಸಿವು ಬಾಧಿಸುತ್ತಿತ್ತು. ನಾವಿಬ್ಬರು ನಿರಾಸೆಯಿಂದ ಮುಖಮುಖ ನೋಡಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸು ಹೊರಟೆವು. ಕೊಡಚಾದ್ರಿಯ ವಿಶೇಷವೆಂದರೇ, ಬೈಕ್ ನಲ್ಲಾಗಲೀ ಅಥವಾ ಜೀಪ್ ನಲ್ಲಾಗಲೀ ನೀವು ಕೊಡಚಾದ್ರಿಯನ್ನು ಹತ್ತಲು ಎಷ್ಟು ಕಷ್ಟಪಡಬೇಕೋ ಅದರ ಎರಡರಷ್ಟು ಕಷ್ಟ ಇಳಿಯುವಾಗ ನಿಮಗಾಗುತ್ತದೆ. ಮೈತುಂಬಾ ಜಾಗೃತಾವಸ್ಥೆ ಆವಾಹಿಸಿಕೊಂಡು ಡ್ರೈವ್ ಮಾಡಬೇಕು. ಕೊಂಚ ಮೈಮರೆತರೂ ನಿಮ್ಮ ವಾಹನ ಪಲ್ಟಿ ಹೊಡೆಯಬಹುದು. ಎಲ್ಲದಕ್ಕಿಂತ ದೊಡ್ಡ ತಾಪತ್ರಯ ಅಂದರೆ ಅಲ್ಲಿ ಸುತ್ತಮುತ್ತ ಹತ್ತಿರದಲ್ಲೆಲ್ಲೂ ನಿಮಗೆ ಮೆಕ್ಯಾನಿಕ್ ಸಿಕ್ಕುವುದಿಲ್ಲ. ಹೀಗಾಗಿ ಆ ರಣಹಸಿವೆಯಲ್ಲೇ ನಾವು ಎಚ್ಚರಿಕೆಯಿಂದ ಕೊಡಚಾದ್ರಿ ಇಳಿದು ಕೆಳತಪ್ಪಲಿನಲ್ಲಿ ನಿಂತೆವು. ಆವತ್ತು ಅದ್ಯಾವ ಮಟ್ಟದ ಹಸಿವೆಂದರೆ ಏನು ಸಿಕ್ಕಿದ್ದರೂ ಗೆಬರಿ ತಿಂದುಬಿಡೋಣ ಎನ್ನುವಷ್ಟು ಉದರ ಸಂಕಟ.

Kodachadri

ಬೈಕ್ ನಿಲ್ಲಿಸಿ ಕೊಂಚ ದಣಿವಾರಿಸಿಕೊಳ್ಳುವ ಹೊತ್ತಿಗೆ ಸಣ್ಣಗೆ ಬಾಯಾರಿಕೆಯೂ ಆಗಿತ್ತು. ಆಗ ಅಲ್ಲಿ ಯಾವುದೇ ಮನೆಗಳಾಗಲೀ ಅಂಗಡಿಗಳಾಗಲಿ ಜನವಸತಿ ಪ್ರದೇಶಗಳಾಗಲಿ ಈಗಿನಂತೆ ಇರಲಿಲ್ಲ. ಅಲ್ಲಿ ಹತ್ತಿರದಲ್ಲಿ ಸಣ್ಣ ಸಣ್ಣ ಗುಡಾರಗಳು ಕಂಡವು. ಅವು ರಸ್ತೆ ನಿರ್ಮಾಣಕ್ಕೆ ಜಲ್ಲಿ ಕಲ್ಲು ಒಡೆಯುವ ಕಲ್ಲೊಡ್ಡರು ಅನ್ನುವ ಅಲೆಮಾರಿಗಳ ತಾತ್ಕಾಲಿಕ ಬಿಡಾರಗಳು. “ಅಮ್ಮ ಒಂಚೂರು ಕುಡಿಯಲು ನೀರು ಸಿಗಬಹುದಾ” ಎಂದಾಗ ಕಂಡಿದ್ದು ಒಬ್ಬಳು ಹೆಣ್ಣುಮಗಳು ನಾಲ್ಕು ಇಟ್ಟಿಗೆ ಜೋಡಿಸಿ ಕಲ್ಲಿನ ಹೆಂಚಿಟ್ಟು ರೊಟ್ಟಿ ಬೇಯಿಸುತ್ತಿದ್ದ ದೃಶ್ಯ. ಹಸಿವು ಪ್ರಾಣ ಹಿಂಡುತ್ತಿತ್ತಲ್ಲ, ನಮ್ಮ ಬಾಯಲ್ಲಿ ಧಾರಾಕಾರ ಜಲಪಾತದಂತೆ ಆಸೆಯ ನೀರು. ನೀರು ಕುಡಿಯಲು ಸಿಲಾವರದ ಬಿಂದಿಗೆ ತಂದು ಕೊಟ್ಟ ಇಳಿವಯಸ್ಸಿನ ಹೆಂಗಸಿಗೆ ಏನನ್ನಿಸಿತೋ ಏನೋ ರೊಟ್ಟಿ ತಿಂತೀರಾ ಅಂದುಬಿಟ್ಟಳು. ಅವತ್ತು ಅವಳ ರೂಪದಲ್ಲಿ ನಮ್ಮೆದುರು ನಿಂತಿದ್ದು ಸಾಕ್ಷಾತ್ ಕೊಲ್ಲೂರ ಮೂಕಾಂಬಿಕೆ. ಸಜ್ಜೆಯ ಸುಟ್ಟ ರೊಟ್ಟಿ ಅದಕ್ಕೊಂದು ಒಣ ಕಾಳಿನ ಪಲ್ಯ, ಹಸಿ ಮೆಣಸಿನ ಹಿಂಡಿ (ಗಟ್ಟಿ ಕಾರದ ಚಟ್ನಿ) ಜೊತೆಗೆ ಅರ್ಧ ಈರುಳ್ಳಿ ತುಂಡು. ಜನ್ಮದಲ್ಲೇ ಅಂತ ರೊಟ್ಟಿ ಮತ್ತೆ ತಿನ್ನಲಾರೆವು ನಾವು. ನಾಲ್ಕು ರೊಟ್ಟಿ; ಉಫ್ ಸಾ ಅಹ್ ಎಂದು ಕಣ್ಣಲ್ಲಿ ಕಾರದ ನೀರು ಜೊತೆಗೆ ಹಸಿವಿಗೆ ಅನ್ನ ಕೊಟ್ಟವರ ಉಪಕಾರ ಸ್ಮರಣೆಯ ಕಣ್ಣೀರು. ರೊಟ್ಟಿ ತಿಂದವರೇ ಹಣ ಕೊಡಲು ಹೋದರೇ ಸುತಾರಾಮ್ ಹಣ ಪಡೆಯಲು ಅವರು ಒಪ್ಪಲೇ ಇಲ್ಲ. ಇಂತಹ ಅನೇಕ ಮರೆಯಲಾರದ ಅನುಭವಗಳ ಗಣಿ ಕೊಲ್ಲೂರು ಮತ್ತು ಕೊಡಚಾದ್ರಿ.

Kodachadri

ಇವತ್ತು ಕೊಲ್ಲೂರು ಭಾಗದ ಶಾಸಕ ಸುಕುಮಾರ ಶೆಟ್ಟರು ಮತ್ತು ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ಕೊಡಚಾದ್ರಿಗೆ ಕೇಬಲ್ ಕಾರ್ ಮಾಡ್ತೀವಿ, ಪ್ರವಾಸೋದ್ಯಮ ಅಭಿವೃದ್ಧಿ ಮಾಡ್ತೀವಿ ಎನ್ನುವ ಪತ್ರಿಕಾ ಹೇಳಿಕೆಯನ್ನು ಓದಿದಾಗ ಈ ಎಲ್ಲಾ ಘಟನೆ ಒಮ್ಮೆಲೆ ಕಣ್ಮುಂದೆ ಬಂದವು. ನಾವು ಕಾಲೇಜು ಕಲಿಯುವಾಗ ಅಂದರೆ 14-15 ವರ್ಷಗಳ ಹಿಂದೆ ಇದ್ದ ಕೊಲ್ಲೂರಾಗಲೀ, ಕೊಡಚಾದ್ರಿಯಾಗಲೀ ಈಗ ಇಲ್ಲ. ಅಲ್ಲಿ ಜನವಸತಿ ಹೆಚ್ಚಾಗಿದೆ. ಕೊಡಚಾದ್ರಿ ಏರಲು ಹತ್ತಿಪ್ಪತ್ತು ಜೀಪುಗಳ ವ್ಯವಸ್ಥೆ ಇದೆ. ಪರಿಸರದಲ್ಲಿ ಪ್ಲಾಸ್ಟಿಕ್ ಬ್ರಹ್ಮರಾಕ್ಷಸ ಸೇರಿಹೋಗಿದ್ದಾನೆ. ಚಾರಣಿಗರ ಸಂಖ್ಯೆಯೂ ಹೆಚ್ಚಾಗಿದೆ. ಭಟ್ಟರ ಮನೆ ಹೋಟೆಲ್ ಸಹ ಆಗಿರಬಹುದೇನೋ. ರಸ್ತೆ ಕೆಲಸಕ್ಕೆಂದು ಬಂದ ಕಲ್ಲೊಡ್ಡರ ಆ ತಾಯಿ ಕೈಲಾಸವಾಸಿಯಾಗಿರಬಹುದು. ಅಲ್ಲಿನ ದುರ್ಗಮ ರಸ್ತೆಯೂ ಕೊಂಚ ಮಟ್ಟಿಗೆ ರಿಪೇರಿಯಾಗಿರಬಹುದು. ಸಾಲು ಮರಗಳು ಇದ್ದಾವೋ ಇಲ್ಲವೋ. ಪರಿಸರವಂತೂ ಮೊದಲಿನ ನಿರ್ಮಲತೆ ಕಳೆದುಕೊಂಡಿದೆ. ಈಗ ಕೇಬಲ್ ಕಾರ್ ಬೇರೆ ಆದರೆ ಅದರ ದೈವಿಕತೆ ಸಂಪೂರ್ಣ ನಾಶವಾದಂತೆಯೇ.

Kodachadri

ಯಾವುದೇ ಸುಂದರ ರಮಣೀಯ ನಿಸರ್ಗ ಮಾನವ ಪ್ರವೇಶವಾಗದಿದ್ದಾಗ ಮತ್ತು ಅಭಿವೃದ್ದಿಯ ಹಸ್ತಕ್ಷೇಪವಾಗದಿದ್ದಾಗ ಮಾತ್ರ ದೈವಿಕವಾಗುಳಿಯುತ್ತದೆ. ಕೊಡಚಾದ್ರಿಯ ಕಥೆಯೂ ಹಾಗೆಯೇ. ಕೇಬಲ್ ಕಾರ್ ವೈರ್ ಎಳೆಯಲು ಮೊದಲ ಮರ ಕಡಿಯುತ್ತಿದ್ದ ಹಾಗೆ ಸರ್ವಜ್ಞ ಪೀಠದಲ್ಲಿ ತಪೋನಿರತರಾದ ಶಂಕರಾಚಾರ್ಯರ ಅವಿನಾಶಿ ಚೇತನ ಎದ್ದು ನಡೆಯುತ್ತದೆ. ನಮ್ಮ ವರ್ಣನಾತೀತ ಅನುಭವಗಳಷ್ಟೆ ಸ್ಮೃತಿಯಲ್ಲಿ ಉಳಿಯುತ್ತದೆ.

–ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ ಕಾಲಂ

***

Tags: kodachadriKollur Mookambikemarjala manthana
ShareTweetSendShare
Join us on:

Related Posts

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

by Shwetha
June 21, 2026
0

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನೀಟ್ ಮರುಪರೀಕ್ಷೆಯ ವ್ಯವಸ್ಥಾಪನೆ ಕುರಿತು ಕೇಂದ್ರ ಸರ್ಕಾರ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಎಚ್‌ಡಿಕೆ ಎಂದ CM – ಮತ್ತೆ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ: ಎಚ್‌ಡಿಕೆ ಮತ್ತು ಬಿಎಸ್‌ವೈಗೆ ಡಿಕೆಶಿ ಕೊಟ್ಟ ಆ ಒಂದು ಖಡಕ್ ಎಚ್ಚರಿಕೆ ಏನು?

by Shwetha
June 21, 2026
0

ಬೆಂಗಳೂರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಮತ್ತು ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡಲು ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ...

BJP ನಾಯಕರಿಗೆ ದೆಹಲಿ ಬುಲಾವ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

BJP ನಾಯಕರಿಗೆ ದೆಹಲಿ ಬುಲಾವ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

by Shwetha
June 21, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರನ್ನು ದೆಹಲಿಗೆ ಕರೆಯಲಾಗಿದೆ ಎಂಬ ವರದಿಗಳ ಮಧ್ಯೆ, ಕರ್ನಾಟಕ ಗೃಹ ಸಚಿವ...

ಆರ್‌ಎಸ್‌ಎಸ್‌ ಗುಲಾಮರಲ್ಲ, ಸಂಘದವರೇ ನೇರ ಉತ್ತರ ನೀಡಲಿ: ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು

ಆರ್‌ಎಸ್‌ಎಸ್‌ ಗುಲಾಮರಲ್ಲ, ಸಂಘದವರೇ ನೇರ ಉತ್ತರ ನೀಡಲಿ: ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು

by Shwetha
June 21, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಮತ್ತು ಅದರ ಕಾರ್ಯವೈಖರಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸಂಘಟನೆಯ ಕುರಿತು...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 21, 2026
0

ದಿನ ಭವಿಷ್ಯ : 21-06-2026 1 ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ಹಾಗೂ ಸಕಾರಾತ್ಮಕ ದಿನವಾಗಿರುತ್ತದೆ. ನೀವು ಕೈಗೊಂಡ ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram