ಸುಳ್ಯ ಶಾಸಕ ಎಸ್.ಅಂಗಾರ ಅವರು ದಿಢೀರ್ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್ ಡೌನ್ ಹಿನ್ನೆಲೆ ಇಂದು ಅಂಗಾರ ಅವರು ಕಡಬದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಬಳಿಕ ಅಲ್ಲಿಂದ ಕಡಬ ಸಹಕಾರಿ ಸಂಘಕ್ಕೆ ಹೋಗಿ ಪಡಿತರ ವಿತರಣೆಗೆ ಸಂಬಂಧಿಸಿ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಕಡಬ ಆಸ್ಪತ್ರೆಗೆ ದಾಖಲಿಸಿದಾಗ ರಕ್ತದೊತ್ತಡ ಕಡಿಮೆಯಾಗಿದೆ ಎಂಬುದು ತಿಳಿದು ಬಂದಿದೆ. ಅಲ್ಲಿಂದ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ಧತೆ ನಡೆಸಿರುವುದಾಗಿ ತಿಳಿದು ಬಂದಿದೆ.
ಇನ್ನು ಎಸ್. ಅಂಗಾರ ಅವರು 6 ಬಾರಿ ಸುಳ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.








