ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ
ಗದಗ: ಆ ಗ್ರಾಮದ ಕೆರೆ ಬರೀ ನೀರು ತುಂಬಿಕೊಂಡಿಲ್ಲ. ಬದಲಾಗಿ ಆಕಾಶದತ್ತರಕ್ಕೆ ಹಾರೋ ಬಾನಾಡಿಗಳ ಲೋಕವನ್ನೇ ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ ತೂಗೋ ತೊಟ್ಟಿಲಾಗೋ ಮೂಲಕ ಆಶ್ರಯ ತಾಣವಾಗಿದೆ. ಅಂತಹ ಸೌಂದರ್ಯದ ತಾಣವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು. ಸ್ವಚ್ಛಂದವಾಗಿ ಹಾರಾಡ್ತಿರೋ ಹಕ್ಕಿಗಳು…! ತಂಪಾದ ಕೆರೆಯಲ್ಲಿ ಈಜುತ್ತಿರೋ ಬಾನಾಡಿಗಳು…! ಕಣ್ಣು ಹಾಯಿಸಿದಲ್ಲೆಲ್ಲಾ ಶ್ವೇತ ವರ್ಣದ ವಿವಿಧ ಪ್ರಭೇದದ ಪಕ್ಷಿಗಳು..!

ಹೌದು ಈ ಬಾನಾಡಿಗಳ ಮನಮೋಹಕ ದೃಶ್ಯಗಳು ಕಂಡು ಬರುವುದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ. ನೇಸರನ ಆಗಮನದ ಬೆನ್ನಲ್ಲೇ ವಿಶಾಲ ಕೆರೆಯ ಸುತ್ತ ಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು.
ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಎಂಥವರನ್ನೂ ಬೆರಗು ಮೂಡಿಸುತ್ತಾ ಇದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ವಿಶಾಲವಾದ ಕೆರೆಯಿದೆ. ಗದಗದಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಲಕ್ಷ್ಮೇಶ್ವರದಿಂದ 12 ಕಿಲೋ ಮೀಟರ್ ಅಂತರದಲ್ಲಿ 138 ಎಕರೆ ವಿಸ್ತಾರದ ಈ ಕೆರೆಯಲ್ಲಿ ಹಲವು ವರ್ಷಗಳಿಂದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಟಿಬೆಟ್, ನಮ್ಮ ದೇಶದ ಲಢಾಕ್‍ಗಳಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ.

ಈ ಬಾನಾಡಿಗಳ ಕಲರವ ಪ್ರತಿವರ್ಷ ಕೆರೆಗೆ ರಂಗು ತರುತ್ತಿದೆ. ಜೊತೆಗೆ ಈ ಪಕ್ಷಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಬಾತು ಕೋಳಿಗಿಂತ ದೊಡ್ಡ ಗಾತ್ರದಲ್ಲಿರೋ ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬಾರ್ ಹೆಡೆಡ್ ಗೂಜ್, ಬ್ರಾಹ್ಮಿಣಿ ಡಕ್, ವೈಟ್ ಬಿಸ್, ಬ್ಲಾಕ್ ಬಿಸ್, ಬ್ಲಾಕ್ ನೆಕ್ಕಡ್, ಲಿಟಲ್ ಕಾರ್ಮೊರಂಟ್ ಹೀಗೆ ಸುಮಾರು 16ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ತವೆ. ಸದ್ಯ 3000 ಕ್ಕೂ ಅಧಿಕ ಪಕ್ಷಿಗಳು ಇಲ್ಲಿದ್ದು ಮೂರು ತಿಂಗಳಲ್ಲಿ ಇನ್ನು ಹೆಚ್ಚಿನ ಪಕ್ಷಿಗಳು ಕಾಣ ಸಿಗುತ್ತವೆ. ಇವುಗಳ ಈಜು, ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತಿದೆ. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ಪಕ್ಷಿ ಪ್ರಿಯರು, ಶಾಲಾ ಮಕ್ಕಳು ಪ್ರವಾಸಕ್ಕಾಗಿ ಆಗಮಿಸಿ ಈ ಪಕ್ಷಿಗಳನ್ನು ಕಲವರವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಈ ಪಕ್ಷಿಗಳು ಇಲ್ಲಿಗೆ ಬರೋದು ಗದಗ ಜಿಲ್ಲೆಯವರಿಗೆ ಹೆಮ್ಮೆಯ ವಿಷಯ ಜೊತೆಗೆ ವಿದೇಶಿ ಪಕ್ಷಿಗಳು ಸ್ವದೇಶದಲ್ಲಿ ನೋಡಲು ಸಿಗುತ್ತಿರುವ ಬಗ್ಗೆ ಸಂತಸ ಕೂಡಾ ಇದೆ.
ಶಾಲಾ ಮಕ್ಕಳ ಹಾಟ್ ಫೇವರಿಟ್ ಮಾಗಡಿ ಕೆರೆ
ಬೆಳಿಗ್ಗೆ ಸೂರ್ಯ ಉದಯಿಸುವ ವೇಳೆಗೆ ಈ ಪಕ್ಷಿಗಳು ಆಹಾರ ಅರಸಿಕೊಂಡ ಕೆರೆಯಿಂದ ಹಾರಿ ಹೋಗುತ್ತವೆ. ನೂರಾರು ಕಿ.ಮೀ ದೂರ ಹೋಗುವ ಪಕ್ಷಿಗಳು ರೈತರ ಹೊಲದಲ್ಲಿ ಬೆಳೆದ ಬೆಳೆಗಳನ್ನು ತಿಂದು ಮೂರು ಘಂಟೆಯಲ್ಲಿ ಮತ್ತೆ ಕೆರೆಗೆ ಬಂದು ಠಿಕಾಣಿ ಹೂಡುತ್ತವೆ. ಮತ್ತೆ ಸಂಜೆ ಸೂರ್ಯ ಮರೆಯಾಗುವ ಮುನ್ನ ಮತ್ತೊಮ್ಮೆ ಅಹಾರ ಅರಸಿ ಹೋಗಿ ಕಾಳು ಕಡಿ ತಿಂದು ಬರುತ್ತವೆ. ಹೀಗೇ ಅಹಾರ ಅರಸಿಕೊಂಡು ಗುಂಪು ಗುಂಪಾಗಿ ಹಾರಿ ಹೋಗುವ ಹಕ್ಕಿಗಳನ್ನು ನೋಡೋದೇ ಕಣ್ಣಿಗೆ ಹಬ್ಬ. ಹಕ್ಕಿಗಳು ಆಗಸದಲ್ಲಿ ಹಾರೋವಾಗ ಬಾನಿನಲ್ಲಿ ರಂಗವಲ್ಲಿ ಬಿಡಿಸಿದ ರೀತಿ ಕಾಣುತ್ತದೆ. ನಮ್ಮೂರಿನ ಕೆರೆಯಲ್ಲಿ ಹಕ್ಕಿಗಳ ಕಲರವ ನೋಡೋದೇ ಚಂದ

ನವೆಂಬರ್ ತಿಂಗಳ ಕೊನೆಯ ವಾರದಿಂದ ಮಾಗಡಿ ಕೆರೆಗೆ ಆಗಮಿಸುವ ಈ ಪಕ್ಷಿಗಳು ಮಾರ್ಚ್ ಅಂತ್ಯಕ್ಕೆ ತಮ್ಮ ದೇಶದತ್ತ ಕಾಲು ಕೀಳುತ್ತವೆ. ಹೀಗಾಗಿ ವಿದೇಶಿ ಪಕ್ಷಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ ಈ ಕೆರೆ. ಆದ್ರೆ ಇದನ್ನೊಂದು ಪ್ರಸಿದ್ದ ಪಕ್ಷಿಧಾಮವನ್ನಾಗಿ ಅಭಿವೃದ್ದಿಗೊಳಿಸುವಲ್ಲಿ ಮಾತ್ರ ಸರ್ಕಾರ ಮುಂದಾಗದಿರೋದು ವಿಷಾದದ ಸಂಗತಿಯಾಗಿದೆ.
ವರದಿ, ಫೋಟೋ ಕೃಪೆ: ಮಲ್ಲೇಶ್,
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








