ಬೆಂಗಳೂರು: ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿ ಈ ಪಠ್ಯಭಾಗ ಬ್ರಾಹ್ಮಣ ಜನಾಂಗದ ಭಾವನೆಗಳನ್ನುಂಟು ಮಾಡಿದೆ. ಈ ವರದಿಗಳ ಹಿನ್ನೆಲೆಯಲ್ಲಿ ಈ ಸಂಕೀರ್ಣ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಅಗತ್ಯ ಸುತ್ತೋಲೆ ಹೊರಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತರಿಗೆ ಸೂಚಿಸಿ ಟಿಪ್ಪಣಿ ನೀಡಲಾಗಿದೆ. ಇಲಾಖೆಯ 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಇಂತಹ ಯಾವುದೇ ಸಂಕೀರ್ಣ ವಿಷಯಗಳ ಕುರಿತು ಶಿಕ್ಷಕರು ಮತ್ತು ವಿಷಯ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಅವರಿಂದ ವರದಿ ಪಡೆದು 15 ದಿನಗಳಲ್ಲಿ ವರದಿ ಸಲ್ಲಿಸಬೇಕೆಂದೂ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ವರದಿ ಪಡೆದ ನಂತರ ವರದಿಯಲ್ಲಿ ಅಂತಹ ಪಠ್ಯಭಾಗಗಳಿದ್ದರೆ ಅದರ ಪರಾಮರ್ಶೆಗೆ ತಜ್ಞ ಸಮಿತಿ ನೇಮಕ ಮಾಡಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.
ಸ್ವತಃ ಮಂತ್ರಾಲಯ ಶ್ರೀಕ್ಷೇತ್ರದ ಸ್ವಾಮೀಜಿಯವರು ನನಗೆ ದೂರವಾಣಿ ಕರೆ ಮಾಡಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಿಲ್ಲ, ಇಲ್ಲವೇ ಹೊಸ ಪಾಠಭಾಗಗಳನ್ನು ಸೇರ್ಪಡೆ ಮಾಡಿಲ್ಲ. ಈ ಹಿಂದೆಯೇ ಆಗಿರುವ ಹಾಗೂ ಪ್ರಸ್ತುತ ಬೆಳಕಿಗೆ ಬಂದಿರುವ ಈ ಪ್ರಮಾದ ಸರಿಪಡಿಸಲು ಇಂದೇ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಸಮಗ್ರ ಪಠ್ಯ ಅವಲೋಕನಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel