ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ 4 ದಿನಗಳ ಕಾಲ ಮುಷ್ಕರ ನಡೆಸಿದ್ದ 200ಕ್ಕೂ ಹೆಚ್ಚು ಸಾರಿಗೆ ನೌಕರರಿಗೆ ನೋಟಿಸ್ ಕೊಟ್ಟು ಶಾಕ್ ನೀಡಲಾಗಿದೆ.
ಕೆಎಸ್‍ಆರ್ ಟಿಸಿ ಸೇರಿದಂತೆ 4 ನಿಗಮಗಳ ನೌಕರರಿಗೆ ನೋಟಿಸ್ ನೀಡಲಾಗಿದ್ದು, 40ರಿಂದ 50 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕೆಲ ಸಿಬ್ಬಂದಿಗಳ ವೇತನವನ್ನೂ ಕಡಿತ ಮಾಡಲಾಗಿದೆ. ಮೇಲಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರೂ ಮತ್ತೆ ಕಿರುಕುಳ ಮುಂದುವರೆದಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಮುಷ್ಕರ ನಡೆಸಿ ಸಾರಿಗೆ ನಿಗಮಗಳಿಗೆ ನಷ್ಟ ಉಂಟು ಮಾಡಿದ್ದಾರೆಂಬ ನೆಪವೊಡ್ಡಿ ಅಮಾನತು ಮಾಡಲಾಗಿದೆ ನಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಿದರೆ ಅಮಾನತು ಮಾಡುವುದು ಎಷ್ಟು ಸರಿ ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ.
ನಾಲ್ಕು ದಿನಗಳ ಮುಷ್ಕರದಿಂದ ನಾಲ್ಕು ಸಾರಿಗೆ ನಿಗಮಗಳಿಗೆ 54 ಕೋಟಿ ನಷ್ಟವಾಗಿದೆ ಎಂದು ಸಂಸ್ಥೆಗಳು ತಿಳಿಸಿವೆ.
ಅಮಾನತು ವಾಪಸ್ ಪಡೆಯಿದ್ದರೆ ಮತ್ತೆ ಹೋರಾಟ
ಮುಷ್ಕರದಲ್ಲಿ ಪಾಲ್ಗೊಂಡ ನೌಕರರನ್ನು ಏಕಾಏಕಿ ಅಮಾನತು ಮಾಡಿದ್ದಕ್ಕೆ ಸಾರಿಗೆ ನೌಕರರ ಸಂಘ ಕಿಡಿಕಾರಿದೆ. ಸಾರಿಗೆ ನಿಗಮಗಳು ಕೂಡಲೇ ನೋಟಿಸ್ ಹಾಗೂ ಅಮಾನತು ವಾಪಸ್ ಪಡೆಯಬೇಕು. ಇಲ್ಲವಾದರೆ ಮತ್ತೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ನೌಕರರ ಒಕ್ಕೂಟಗಳು ಎಚ್ಚರಿಕೆ ನೀಡಿವೆ.
ಸಾರಿಗೆ ಸಚಿವರು ನೌಕರರ ಹಿತ ಕಾಯುವುದು ಎಂದರೆ ಇದೇನಾ ಎಂದು ಪ್ರಶ್ನಿಸಿರುವ ಸಿಬ್ಬಂದಿ, ಲಕ್ಷ್ಮಣ ಸವದಿ ಗಮನಕ್ಕೆ ಬಾರದೆ ಅಧಿಕಾರಿಗಳು ಅಮಾನತು ಮಾಡಿದರಾ ಎಂದು ಆರೋಪಿಸಿದ್ದಾರೆ.
ಹಲ್ಲೆ, ಬಸ್ ಜಖಂ ಮಾಡಿದವರ ಮೇಲೆ ಕ್ರಮ
ಮುಷ್ಕರದಲ್ಲಿ ಪಾಲ್ಗೊಂಡ ಸಿಬ್ಬಂದಿಯನ್ನು ಅಮಾನತು ಮಾಡಿಲ್ಲ, ಮುಷ್ಕರ ವೇಳೆ ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ, ಬಸ್‍ಗಳನ್ನು ಜಖಂಗೊಳಿಸಿದವರ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಲಾಗಿದೆ. ಯಾವ ಸಿಬ್ಬಂದಿಯ ವೇತನವನ್ನೂ ಕಡಿತದ ಬಗ್ಗೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ನಿಗಮಗಳು ಸ್ಪಷ್ಟನೆ ನೀಡಿವೆ.

ಕಾರಣ ತಿಳಿದು ಮುಂದಿನ ಕ್ರಮ
ಮುಷ್ಕರದಲ್ಲಿ ಪಾಲ್ಗೊಂಡ 200ಕ್ಕೂ ಹೆಚ್ಚು ನೌಕರರಿಗೆ ನೋಟಿಸ್ ನೀಡಲಾಗಿದೆ. 40ರಿಂದ 50 ಮಂದಿಯನ್ನು ಅಮಾನತು ಮಾಡಲಾಗಿದೆ. ಯಾವ ಕಾರಣಕ್ಕೆ ಅಮಾನತು ಮಾಡಿದ್ದಾರೆಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಂತರ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗುವುದು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಸಾರಿಗೆ ನೌಕರರು ಮತ್ತೆ ಎಲ್ಲಿ ಹೋರಾಟ ಮಾಡುತ್ತರೋ ಎಂಬ ಆತಂಕವಿದೆ. ಸಿಬ್ಬಂದಿ ಬಾಯಿ ಮುಚ್ಚಿಸಲು ಅಮಾನತು ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಏನೇ ಮಾಡಿದರೂ ಹೆದರುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








