ಬೆಂಗಳೂರು: ಕೊರೊನಾ ಭೀತಿಯಿಂದ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ರಾಜ್ಯಾದ್ಯಂತ ಪೊಲೀಸರು ಹಗಲಿರುಳು ಎನ್ನದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಬಡವರಿಗೆ ಉಚಿತವಾಗಿ ಆಹಾರ ಪೂರೈಕೆ ಮಾಡುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲೂ ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಸುಬ್ರಮಣ್ಯಪುರ ಪೊಲೀಸರು ಠಾಣೆಯಲ್ಲೇ ಅಡುಗೆ ತಯಾರಿಸಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಇದೀಗ ಪೊಲೀಸರಿಗೆ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ದಿನಸಿ ವಸ್ತುಗಳನ್ನ ನೀಡಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ರಸ್ತೆ ಬದಿಯಲ್ಲಿರುವ ಬಡವರು, ಕೂಲಿ ಕಾರ್ಮಿಕರು ಊಟಕ್ಕಾಗಿ ಪರಿತಪಿಸುವಂತಾಗಿದೆ. ಈ ಹಿನ್ನೆಲೆ ಪೊಲೀಸರು ತಮ್ಮ ಠಾಣೆಯಲ್ಲೇ ಅಡುಗೆ ತಯಾರಿಸಿ ಬಡವರಿಗೆ ಊಟ ನೀಡುತ್ತಿದ್ದಾರೆ.ಇದಕ್ಕಾಗಿ ಅಕ್ಕಿ, ಬೇಳೆ, ಎಣ್ಣೆ, ಉಪ್ಪು ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನ ಶೈನ್ ಶೆಟ್ಟಿ ನೀಡಿದ್ದಾರೆ. ಜೊತೆಗೆ ಪೊಲೀಸರು ಮಾಡುತ್ತಿರುವ ಮಾನವೀಯ ಕಾರ್ಯಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.