ಉಡುಪಿ: ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿದ್ದು, ಕೊರೊನಾಸುರನ ಹೊಡೆತಕ್ಕೆ ಕೋಟ್ಯಾಂತರ ಜನರ ಬದುಕು ಬರ್ಬಾದ್ ಆಗಿದೆ. ಈ ಹೆಮ್ಮಾರಿ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧನ ಸಹಾಯ ಕೋರಿದ್ದಾರೆ. ಈ ಮಧ್ಯೆ ಕೋವಿಡ್-19 ಸೋಂಕಿನ ಹೋರಾಟಕ್ಕೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೈಜೋಡಿಸಿದ್ದಾರೆ. ಅಗತ್ಯ ಸುರಕ್ಷತಾ ಕ್ರಮಗಳಿಗೆ ನೆರವಾಗುವ ಸಲುವಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕರಂದ್ಲಾಜೆ ಅವರು ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಿಂದ ಒಂದು ಕೋಟಿ ನೆರವು ನೀಡಿದ್ದಾರೆ. ಜೊತೆಗೆ ವೈಯಕ್ತಿಕವಾಗಿ ಒಂದು ತಿಂಗಳ ತನ್ನ ವೇತನ ಒಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆಯವರು ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಉಡುಪಿಯಲ್ಲಿ ಇದುವರೆಗೆ ಮೂರು ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢವಾಗಿದೆ. ನಿನ್ನೆ ಇಬ್ಬರಿಗೆ ಕೋವಿಡ್19 ಸೋಂಕು ದೃಢವಾಗಿತ್ತು. ಈ ಬಗ್ಗೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದರು.








