ಕೊರೊನಾ ಎಫೆಕ್ಟ್ ನಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಆದರೂ ಸಹ ಕೊರೊನಾ ಹರಡುವಿಕೆ ಕಡಿಮೆ ಆಗುತ್ತಿಲ್ಲ. ಜೊತೆಗೆ ಲಾಕ್ ಡೌನ್ ನಿಂದ ವಲಸೆ ಕಾರ್ಮಿಕರಿಗೆ ತೊಂದರೆ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಿರಿಯ ಅಧಿಕಾರಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಬಿ.ಬಿ.ಎಂ.ಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬೆಂಗಳೂರಿನ ಸ್ಥಳೀಯರು ಸಾಧ್ಯವಾದಷ್ಟು ತಮ್ಮ ಏರಿಯಾದಲ್ಲಿ ತರಕಾರಿ, ದಿನಸಿ ತೆಗೆದುಕೊಳ್ಳಬೇಕು.ಅಗತ್ಯವಸ್ತುಗಳು ಪಡೆಯಲು ಕಾಲ್ನಡಿಗೆಯಲ್ಲಿ ಹೋಗಿ ಬರಬೇಕು. ಯಾರು ಸಹ ವಾಹನಗಳನ್ನು ಬಳಸಬಾರದು.
ಇನ್ನೂ ವಲಸೆ ಕಾರ್ಮಿಕರು ಎಲ್ಲಿ ಇದ್ದಾರೋ ಅಲ್ಲೆ ಇರಬೇಕು. ಬೆಂಗಳೂರಿನಲ್ಲಿ ಇರುವ ವಲಸೆ ಕಾರ್ಮಿಕರಿಗೆ ಕಲ್ಯಾಣ ಮಂಟಪದಲ್ಲಿ ವಸತಿ ಕಲ್ಪಿಸಲಾಗುತ್ತದೆ. ಕಲ್ಯಾಣ ಮಂಟಪದಲ್ಲಿ ಊಟವನ್ನು ನೀಡಲಾಗುತ್ತದೆ. ಈ ರೀತಿಯಾಗಿ ಬೆಂಗಳೂರಿನ ಪ್ರತಿಯೊಂದು ವಾರ್ಡ್ ಗಳಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಬಿಬಿಎಂಪಿ ಮಾಡುತ್ತದೆ. ಕಾನೂನು ಸುವ್ಯವಸ್ಥೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಇದರ ಜವಬ್ದಾರಿಯನ್ನು ವಲಯ ಡಿಸಿಪಿಗಳಿಗೆ ಮತ್ತು ಬಿ.ಬಿ.ಎಂ.ಪಿ ಜಂಟಿ ಆಯುಕ್ತರಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇರುವ ವಲಸೆ ಕಾರ್ಮಿಕರು ಅವರ ಊರುಗಳಿಗೆ ಹೊರಟರೆ ಬೇರೆ ಜಿಲ್ಲೆಗಳಲ್ಲಿ ಸಮಸ್ಯೆ ಆಗುತ್ತದೆ. ಹಾಗಾಗಿ ಅವರಿಗೆ ಇಲ್ಲೇ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಬೇರೆ ಜಿಲ್ಲೆಯಲ್ಲಿ ಇರುವ ವಲಸೆ ಕಾರ್ಮಿಕರಿಗೂ ಅನ್ವಯವಾಗುತ್ತದೆ. ಜಿಲ್ಲಾ ಮಟ್ಟದದಲ್ಲಿ ಇದರ ಜವಾಬ್ದಾರಿ ಜಿಲ್ಲಾಧಿಕಾರಿಗಳು ನಿಭಾಯಿಸುತ್ತಾರೆ. ಅಲ್ಲಿನ ವಲಸೆ ಕಾರ್ಮಿಕರು ಎಲ್ಲೂ ಹೋಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.








