ಬೆಂಗಳೂರು: ಲಸಿಕೆ ಹಾಕುವ ಅಣಕು ಕಾರ್ಯದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ದೊರೆತಿದೆ. ಈ ತಿಂಗಳಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಲಸಿಕೆ ಸಿಕ್ಕ ಬಳಿಕ ವಿತರಿಸಲು ಈ ಅಣಕು ಕಾರ್ಯ ನೆರವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಮಾದರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಐದು ಕಡೆ ಲಸಿಕೆ ನೀಡುವ ಅಣಕು ಪ್ರಯೋಗ ನಡೆದಿದೆ. ಯಲಹಂಕ ಆಸ್ಪತ್ರೆಯಲ್ಲಿ 25 ಮಂದಿಗೆ (ಅಣಕು) ಲಸಿಕೆ ನೀಡಲಾಗುತ್ತಿದೆ. ಶಿಷ್ಟಾಚಾರದಂತೆ ಲಸಿಕೆ ಹಾಕುವ ಅಣಕು ಪ್ರಕ್ರಿಯೆ ನಡೆದಿದೆ. ಲಸಿಕೆ ಬಂದ ಬಳಿಕ ಈ ಅಭ್ಯಾಸ ನೆರವಾಗಲಿದೆ. ಜನವರಿ ತಿಂಗಳಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದೆ. ಕಳೆದ ಎರಡು ತಿಂಗಳಿಂದ ಸಭೆ ನಡೆಸಿ, ಆಸ್ಪತ್ರೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಕೊರೊನಾ ಲಸಿಕೆಯನ್ನು ಕೊರೊನಾ ಯೋಧರಿಗೆ ಮೊದಲ ಹಂತದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ನೀಡಲಿದೆ. ಅದರಂತೆ, ಕ್ರಮ ವಹಿಸಲಾಗುವುದು. ಲಸಿಕೆ ವಿತರಣೆಗೆ ಬೇಕಾದ ಕೋಲ್ಡ್ ಸ್ಟೋರೇಜ್, ಸಾರಿಗೆ ವ್ಯವಸ್ಥೆ, ಸಿಬ್ಬಂದಿ ನೇಮಕ ಮೊದಲಾದ ಸಿದ್ಧತೆ ಪೂರ್ಣಗೊಂಡಿದೆ. ಬೇರೆ ಲಸಿಕೆಗಳನ್ನು ವಿತರಿಸಲು ಬೇಕಿರುವ ಮೂಲಸೌಕರ್ಯಗಳು ನಮ್ಮಲ್ಲಿವೆ. ಇದನ್ನು ಕೂಡ ಕೊರೊನಾ ಲಸಿಕೆ ಸಂಗ್ರಹ, ವಿತರಣೆಗೆ ಬಳಸಿಕೊಳ್ಳಲಾಗುವುದು ಎಂದರು.

ಬ್ರಿಟನ್‍ನಿಂದ ಬಂದವರಲ್ಲಿ 42ರಲ್ಲಿ 32 ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು. 10 ಜನರಿಗೆ ರೂಪಾಂತರಗೊಂಡ ಕೊರೊನಾ ವೈರಾಣು ಇರುವುದು ದೃಢವಾಗಿದೆ. ಈ ಹತ್ತು ಮಂದಿಗೆ ತೀವ್ರವಾದ ಸಮಸ್ಯೆ ಇಲ್ಲ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಬೇಗನೆ ಗುಣಮುಖರಾಗುವ ವಿಶ್ವಾಸವಿದೆ. ಈಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. 12 ಲಕ್ಷಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ. ಇದೇ ರೀತಿ ಇದ್ದರೆ, ಕೊರೊನಾದಿಂದ ಆಪತ್ತು ಎದುರಿಸುವ ದಿನ ದೂರವಾಗಿದೆ ಎನ್ನಬಹುದು ಎಂದರು.
ಲಸಿಕೆ ವಿತರಣೆಗೆ ಬೇಕಾದ ಹೆಚ್ಚುವರಿ ಮೂಲಸೌಕರ್ಯವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಸಚಿವ ಸುಧಾಕರ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








