ಬೆಂಗಳೂರು: ಬಹಿರಂಗ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಸ್ವಪಕ್ಷದವರೇ ಆದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರ ಸಭೆಯಲ್ಲಿ ಬಿಎಸ್‍ವೈ ಎದುರೇ ಆಕ್ರೋಶ ಹೊರಹಾಕಿದ್ದಾರೆ.
ಬಜೆಟ್‍ಗೆ ಸಿದ್ಧತೆ ಆರಂಭಿಸಿರುವ ಯಡಿಯೂರಪ್ಪ, ಸೋಮವಾರ ಇಡೀ ದಿನ ವಲಯವಾರು ಶಾಸಕರ ಸಭೆ ನಡೆಸಿದರು. ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಶಾಸಕರ ಸಭೆಯಲ್ಲಿ ವಿಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್‍ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

“ಎಲ್ಲದಕ್ಕೂ ನಿಮ್ಮ ಮಗನ ಮಾತೇ ಅಂತಿಮವಾದ್ರೆ..ಪಕ್ಷಕ್ಕಾಗಿ ದುಡಿದವರ ಪಾಡೇನು ? ನಾನು ಪಕ್ಷದ ಶಾಸಕ. ನಾನು ನಿಮ್ಮ ಬಳಿ ಮಾತನಾಡಬೇಕು. ಆದರೆ, ನಾನೇಕೆ ನಿಮ್ಮ ಮಗನ ಬಳಿ ಮಾತನಾಡಬೇಕು” ಎಂದು ಯತ್ನಾಳ್ ಗುಡುಗಿದ್ದಾರೆ.
ಹಿರಿಯರಾಗಿ ನೀವು ಮಗನು ಹೇಳಿದ ಎಲ್ಲದಕ್ಕೂ ತಲೆದೂಗಿದರೆ ಹೇಗೆ ? ಸರ್ಕಾರದಲ್ಲಿ ಮಗನ ಹಸ್ತಕ್ಷೇಪ ಕಡಿಮೆ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಯತ್ನಾಳ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾವೇರಿ, ಕೃಷ್ಣ ಪ್ರವೇಶಕ್ಕೆ ಮುಕ್ತ..
ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಮಿಡಿಗೊಳ್ಳುತ್ತಿದ್ದರು ತಾಳ್ಮೆಯಿಂದಲೇ ಕೇಳುತ್ತಿದ್ದ ಸಿಎಂ ಯಡಿಯೂರಪ್ಪ, ನಿಮ್ಮ ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನ ಬಳಿ ಮಾತನಾಡಿ. ಗೃಹ ಕಚೇರಿ ಕೃಷ್ಣಾ, ಕಾವೇರಿ ಪ್ರವೇಶಕ್ಕೆ ನಿಮಗೆ ಮುಕ್ತ ಅವಕಾಶ ಇದೆ. ಬೆಂಗಳೂರಿನಲ್ಲೊಂದು, ವಿಜಯಪುರದಲ್ಲೊಂದು ಹೇಳಿಕೆ ನೀಡಿ ಪಕ್ಷ ಹಾಗೂ ಸರ್ಕಾರಕ್ಕಡ ಡ್ಯಾಮೇಜ್ ಮಾಡಬೇಡ ಎಂದು ಸಿಎಂ ಕಿವಿ ಮಾತು ಹೇಳಿದ್ದಾರೆ.

ಇದಕ್ಕೆ ಉತ್ತರ ನೀಡಿದ ಯತ್ನಾಳ್, ಶಾಸಕರ ಕ್ಷೇತ್ರಕ್ಕೆ ಅನುದಾನಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಪಕ್ಷದ ಶಾಸಕರ ಸ್ಥಿತಿ ಪ್ರತಿಪಕ್ಷಗಳಿಂದ ನಗೆಪಾಟಲಿಗೀಡಾಗುವಂತೆ ಮಾಡಿದೆ. ನಿಜವಾಗಿಯೂ ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ಹಸ್ತಕ್ಷೇಪ ನನ್ನ ಗಮನಕ್ಕೆ ಬಂದಿಲ್ಲ
ಶಾಸಕರು ಕೆಲಸ ಮಾಡಿಸಿಕೊಳ್ಳಲು ವಿಜಯೇಂದ್ರ ಬಳಿ ಹೋಗಬೇಕೆಂಬ ಯತ್ನಾಳ್ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ, ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಇದ್ದರೆ ಸರಿಪಡಿಸುತ್ತೇನೆ ಭರವಸೆ ನೀಡಿದರು ಎನ್ನಲಾಗಿದೆ.

ಕರಾವಳಿ ಭಾಗದ ಶಾಸಕರಿಂದಲೂ ಅಸಮಾಧಾನ..
ಯಡಿಯೂರಪ್ಪ ನಡೆಸಿದ ವಲಯವಾರು ಶಾಸಕರ ಸಭೆಯಲ್ಲಿ ಕರಾವಳಿ ಭಾಗದ ಶಾಸಕರೂ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾವು ಕರಾವಳಿ ಭಾಗದ ಶಾಸಕರು. ಸರ್ಕಾರಕ್ಕಾಗಲೀ, ಪಕ್ಷಕ್ಕಾಗಲೀ ಇರಿಸು-ಮುರಿಸು ಮಾಡಿಲ್ಲ. ಶಿಸ್ತಿನಿಂದ ಇರುತ್ತೇವೆ ಎಂಬ ಕಾರಣಕ್ಕೆ ಹಲವು ಬಾರಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಆಡಳಿತ, ಅನುದಾನದ ವಿಷಯದಲ್ಲಿಯೂ ನಿರ್ಲಕ್ಷ್ಯ ಆಗಿದೆ. ಎಲ್ಲದಕ್ಕೂ ಸುಮ್ಮನೆ ಇರುತ್ತೇವೆ ಎಂಬ ಕಾರಣಕ್ಕೆ ಹಲವು ಬಾರಿ ನಿರ್ಲಕ್ಷ್ಯ ಮಾಡಲಾಗಿದೆ. ಅನುದಾನ ಕೊಡಿ, ಉತ್ತಮ ಕಾರ್ಯಕ್ರಮ ಕೊಟ್ಟು ಸರ್ಕಾರದ ಘನತೆ ಉಳಿಸಿಕೊಳ್ಳಿ ಎಂಬ ಕರಾವಳಿ ಭಾಗದ ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ ಬಿಎಸ್‍ವೈ ಸರಿಪಡಿಸುವ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







