ಮಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರೋಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ವಿಭಾಗೀಯ ಮಟ್ಟದ ಸಮಾವೇಶಕ್ಕೂ ಮುನ್ನ ಮಾತನಾಡಿದ ಡಿಕೆಶಿ, ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿರ್ಬಂಧ ಕಾಯ್ದೆ ತರುವ ಅಗತ್ಯ ಇರಲಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಗೋಹತ್ಯೆ ನಿಷೇಧಕಾಯ್ದೆ ಮೊದಲೇ ಇತ್ತು. 1964ರಲ್ಲೇ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ರಾಜಕಾರಣದ ಕಾರಣಕ್ಕೆ ಬಿಜೆಪಿಯವರು ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ನಾವೆಲ್ಲ ಗೋಮಾತೆಗೆ ಗೌರವ ಕೊಡುವವರು. ಗೋಮಾತೆ ಗೌರವ ಕೊಡುವುದು ನಮ್ಮ ಸಂಸ್ಕøತಿ. ಎಲ್ಲಾ ಧರ್ಮದಲ್ಲೂ ಗೋವಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಡುತ್ತಿದ್ದಾರೆ. ಆದರೆ, ರಾಜಕಾರಣ ಮಾಡಲು ವಿಶೇಷ ಮಾಡಲು ಬಿಜೆಪಿಯರು ಹೊರಟಿದ್ದಾರೆ ಮಾಡಿಕೊಳ್ಳಲಿ ಬಿಡಿ ಎಂದು ಡಿಕೆಶಿ ಟೀಕಿಸಿದ್ದಾರೆ.
ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದನ್ನು ಬ್ಯಾನ್ ಮಾಡಲಿ, ರೈತರಿಗೆ ಸರ್ಕಾರವೇ 25ರಿಂದ 50 ಸಾವಿರ ಕೊಡಲಿ. ಆದರೆ, ಯಾವುದೋ ಒಂದು ವರ್ಗವನ್ನು ಗುರಿಯಾಗಿಸಿಕೊಳ್ಳುವುದು ಸರಿಯಲ್ಲ ಎಂದರು.
ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು, ಬಿಲ್ಲವರು ಸೇರಿ ಎಲ್ಲಾ ವರ್ಗದವರು ಹಸುಗಳನ್ನು ಸಾಕುತ್ತಾರೆ. ಹೀಗಾಗಿ ಸರ್ಕಾರವೇ ದುಡ್ಡು ಕೊಟ್ಟು ಹಸುಗಳಿಗೆ ಬೆಲೆ ನಿಗಧಿ ಮಾಡಿಕೊಂಡು, ಕಟ್ಟಿಕೊಟ್ಟು ಅವರ ಮನೆಗೆ ತಗೊಂಡು ಹೋಗಿ ಇಟ್ಟುಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ನಾನು ಕೂಡ ಗೋಮಾಂಸ ತಿನ್ನುವೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ವೈಯಕ್ತಿಕ ಅಭ್ಯಾಸಗಳ ಬಗ್ಗೆ ಹೇಳಿದ್ದಾರೆ. ಗೋಹತ್ಯೆ ಕಾಯ್ದೆ ಮೊದಲೇ ಇತ್ತು ಎಂದು ಸಿದ್ದರಾಮಯ್ಯ ಕೂಡ ಹಲವು ಬಾರಿ ಹೇಳಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








