ದ.ಕ. ಜಿಲ್ಲೆಯಲ್ಲಿ ಮಂಗಳವಾರ ಹೊಸ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ದುಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.
ಸುಳ್ಯ ಮೂಲದ 34 ವರ್ಷ ವಯಸ್ಸಿನ ವ್ಯಕ್ತಿ ಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಇವರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ನಿವಾಸಿ.
ಮಾರ್ಚ್ 18ರಂದು ದುಬೈನಿಂದ ಬಂದಿದ್ದ ಇವರಿಗೆ, ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಯಾವುದೇ ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೆನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು.
ಮಾರ್ಚ್ 28ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದ್ದು ಪರೀಕ್ಷಾ ವರದಿ ಮಾರ್ಚ್ 31ರ ಮಂಗಳವಾರ ಲಭ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಳೆದ 3 ದಿನಗಳಿಂದ ನೆಗೆಟಿವ್ ಪ್ರಕರಣಗಳು ವರದಿಯಾಗುತ್ತಿದ್ದ ಕಾರಣ ದ.ಕ. ಜನತೆ ಕೂಡ ನಿರಾಳರಾಗಿದ್ದರು. ಆದರೆ, ಇಂದು ಹೊಸದೊಂದು ಪ್ರಕರಣ ವರದಿಯಾಗುವ ಮೂಲಕ ಜನರ ಆತಂಕಕ್ಕೆ ಕಾರಣವಾಗಿದೆ