ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆ 7 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾಹಿತಿ ನೀಡಿದ್ದು, ಯಾವುದೇ ಪರೀಕ್ಷೆ, ಷರತ್ತುಗಳಿಲ್ಲದೆ 7ನೇ ತರಗತಿಯ ವಿದ್ಯಾರ್ಥಿಗಳು 8ನೇ ತರಗತಿಗೆ, 8ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿಗೆ ಕಳುಹಿಸಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನ ಆರಂಭಿಸುವುದಕ್ಕೆ ಮುಂಚಿತವಾಗಿ 7ನೇ ತರಗತಿಗೆ ಸಿದ್ಧಪಡಿಸಲಾಗಿರುವ ಪ್ರಶ್ನೆಪತ್ರಿಕೆಯನ್ನಿಟ್ಟು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಆದರೆ ಸದ್ಯ 7 ಮತ್ತು 8ನೇ ತರಗತಿಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈವರೆಗೆ ತರಗತಿ ಪರೀಕ್ಷೆಗಳಾಗಿ ನಡೆದಿರುವ Formative ಮತ್ತು summative ಪರೀಕ್ಷೆಗಳ ಆಧಾರದ ಮೇಲೆ 10ನೇ ತರಗತಿಗೆ ಉತ್ತೀರ್ಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಇನ್ನು ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ಏಪ್ರಿಲ್ 14ರ ಬಳಿಕ ಪರಿಸ್ಥಿತಿಯ ಅವಲೋಕನ ನಡೆಸಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಅದೇ ರೀತಿ ಬಾಕಿ ಉಳಿದಿರುವ ಪಿಯುಸಿ ಕೊನೆಯ ಪರೀಕ್ಷೆ(ಇಂಗ್ಲಿಷ್ ) ನಡೆಸುವ ಬಗ್ಗೆಯೂ ಏಪ್ರಿಲ್ 14ರ ಬಳಿಕ ತೀರ್ಮಾನಿಸಲಾಗುವುದು ಎಂದು ಸಚಿವರು ಸ್ಪಷಪಡಿಸಿದ್ದಾರೆ.








