ಭಾರತ ಕರೋನಾ ಹೋರಾಟದಲ್ಲಿ 100% ಬೇಡ ಶೇ. 80ರಷ್ಟು ಗೆಲುವು ಸಾಧಿಸಿದ್ರೂ ಸಾಕು. ಕರೋನಾ ಕದನದಲ್ಲಿ ಕಾದಿದ ನಮ್ಮ ಸೇನಾನಿಗಳಿಗೆ ನಾವು 130 ಕೋಟಿ ದೇಶವಾಸಿಗಳು ಸ್ವಯಂ ಪ್ರೇರಿತರಾಗಿ ಚಪ್ಪಾಳೆ ತಟ್ಟುತ್ತೇವೆ, ಸಿಳ್ಳೆ ಹೊಡೆಯುತ್ತೇವೆ. ಗಂಟೆ ಜಾಗಂಟೆ ಹಲಗೆ ಡೋಲು ತಮಟೆ ನಾದಸ್ವರ ಪಿಟೀಲು ಮೃದಂಗ ಬ್ಯಾಂಡ್ ಸೆಟ್ಟು ಇತ್ಯಾದಿಯಾಗಿ ಬಡಿಯುವ ಊದುವ ಯಾವುದೇ ಇನ್ ಸ್ಟ್ರುಮೆಂಟ್ ಮಟೀರಿಯಲ್ಲುಗಳಿದ್ರೂ ಹಿಡಿದುಕೊಂಡು ನಮ್ಮ ಮನೆ ಬಾಗಿಲಲ್ಲಿ ಚೀನಾಗೆ ಕೇಳಿಸುವಂತೆ ಬೊಬ್ಬೆ ಹೊಡೆಯುತ್ತೇವೆ.
ಅದರಾಚೆಗೆ ನಮ್ಮ ಮನೆ ಮುಂದೆ ಎಣ್ಣೆ ಬತ್ತಿಗಳು ಮುಗಿದು ಹೋಗುವತನಕ ಪ್ರಣತಿ ಹಚ್ಚಿ ದುಡಿದವರಿಗೆ ಕೃತಜ್ಞತೆಯನ್ನೂ ಮಡಿದವರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸುತ್ತೇವೆ. ಪರಮ ದಾಯಾಮಯಿ ಏಸು ಕ್ರಿಸ್ತ ಬುದ್ದ ಮಹಾವೀರ ಪಂಜುರ್ಲಿ ಕಲ್ಲುಟ್ಕ, ಜುಮಾದಿ, ಬೊಬ್ಬರ್ಯ, ಕೊರಗಜ್ಜನ ಸಹಿತ ಎಲ್ಲಾ ದೈವಗಳಿಗೂ ನಮ್ಮ ಮುಕ್ಕೋಟಿ ದೇವರುಗಳಿಗೂ ಸೇರಿ ಒಂದೊಂದು ಕ್ಯಾಂಡಲ್ ಹಚ್ಚಿ ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇವೆ.
ಆಯ್ತು ಅದೆಲ್ಲವನ್ನೂ ನಮ್ಮ ಕರ್ತವ್ಯ ಧರ್ಮ ಎಂದೇ ಮಾಡುತ್ತೀವೆ. ಅದೆಲ್ಲಾ ಈಗಲ್ಲ ಮೊದಲು ಭಾರತ ಈ ಸಂಕಷ್ಟದಿಂದ ಪಾರಾಗಬೇಕು. ಇದಕ್ಕೆ ದಾರಿ ಹುಡುಕಿ, ವೈದ್ಯಕೀಯ ನೆರವು ಕೊಡಿ. ಈಗಾಗಲೇ ನೀವು ಸರ್ಕಾರಗಳು ಘೋಷಿಸಿರುವ ನಿಧಿಗೆ ಪ್ರವಾಹೋಪಾದಿಯಲ್ಲಿ ನಾವು ಭಾರತೀಯರು ಸ್ಪಂದಿಸುತ್ತಿದ್ದೇವೆ. ಮೂರ್ನಾಲ್ಕು ಭಾರತದ ವಿಶ್ವಾಸಿ ರಾಷ್ಟ್ರಗಳೂ ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡಿವೆ ಎಂದು ಓದಿದೆ. ವಿಶ್ವಬ್ಯಾಂಕ್ ಸಹ 100 ಬಿಲಿಯನ್ ಡಾಲರ್ ನೆರವು ನೀಡಿದೆ.
ಈಗ ನಿಮ್ಮ ಜವಾಬ್ದಾರಿ ದೊಡ್ಡದಿದೆ. ಮೂರು ಮೂರು ದಿನಕ್ಕೊಂದು ಬಾರಿ ಟಿವಿಯಲ್ಲಿ ಬಂದು ಭಾವನಾತ್ಮಕವಾಗಿ ಮಾತಾಡಿ ಹೊಣೆಗಾರಿಕೆ ಮರೆಯಬೇಡಿ. ನಿಮಗೆ ರಾಜಕಾರಣ ಮಾಡಲು ಮುಂದೆ ಸಾಕಷ್ಟು ಸಮಯವಿದೆ. ಆದರೆ ಆ ರಾಜಕಾರಣವನ್ನು ನಮ್ಮ ಗೋರಿಗಳ ಮೇಲೆ ಮಾಡಲಾಗುವುದಿಲ್ಲ. ಇಷ್ಟನ್ನು ಯಾರಿಗೆ ಹೇಳುತ್ತಿದ್ದೀನಿ ಅನ್ನೋದು ನಿಮಗೆ ತಿಳಿದಿದೆ. ಭಾರತದ ಭಾಗ್ಯವಿಧಾತರಿಗೆ ಮತ್ತೆ ಅಡ್ರೆಸ್ ಮಾಡಿ ಹೇಳಬೇಕಾದ ಜರೂರತ್ತಿಲ್ಲ ಎಂದು ಭಾವಿಸುತ್ತಾ ನನ್ನ ಚಿಕ್ಕ ಭಾಷಣವನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಇಂಡಿಯೋ ಗೋ ಕರೋನಾ
– ವಿಭಾ








