ಮಂಗಳೂರು : ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಇಂದಿನ ವಿಡಿಯೋ ಭಾಷಣದಲ್ಲಿ ಲಾಕ್ ಡೌನ್ ಬಗ್ಗೆ ಚಕಾರವೆತ್ತದೆ, ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ದೀಪ ಹಚ್ಚಿ ಎಂದು ಕರೆಕೊಟ್ಟಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಏತನ್ಮಧ್ಯೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಪ್ರಧಾನಿ ಕರೆಗೆ ಆಕ್ಷೇಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಏನಿದೆ?
“ಚಪ್ಪಾಳೆ ತಟ್ಟಾಯ್ತು, ಪಾತ್ರೆ ಬಡಿದಾಯ್ತು.ಈಗ ಕ್ಯಾಂಡಲ್ ಹಚ್ಚ ಬೇಕೇ? ಪ್ರಧಾನಿಗಳೇ. ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಇಲ್ವಾ? ಇದರ ಬದಲು ನಿಜವಾದ ಸಮಸ್ಯೆ ಬಗ್ಗೆ ಗಮನ ಹರಿಸಿ ಸರ್…ಜನಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ” ಎಂದು ಖಾದರ್ ಆಗ್ರಹಿಸಿದ್ದಾರೆ. ಇಲ್ಲಿ ಖಾದರ್ ಅವರು ಇಂಡಿಯಾ ಫೈಟ್ಸ್ ಕೊರೊನಾ ಎನ್ನುವ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.
ಈ ಟ್ವೀಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಅವರು, “ಜನರನ್ನು ನೋವಿನಿಂದ ಹೊರತನ್ನಿ, ಆರ್ಥಿಕ ತಲ್ಲಣ ಸರಿಪಡಿಸಿ, ಕೋವಿಡ್ ಹೋರಾಟದಲ್ಲಿ ನಾವು ನಿಮ್ಮ ಜೊತೆ ಇದ್ದೀವಿ, ಎಲ್ಲವೂ ಸರಿ ಹೋದ ಮೇಲೆ ಒಟ್ಟಾಗಿ ದೀಪ ಹಚ್ಚೋದಲ್ಲ, ದೀಪಾವಳಿಯನ್ನೇ ಮಾಡೋಣ.. ಮೊದಲು ಸಮಸ್ಯೆ ಬಗ್ಗೆ ಗಮನಹರಿಸೊಣ ಸರ್….ಏನಂತೀರಿ?Be Practical Please” ಎಂದು ಖಾದರ್ ಕುಟುಕಿದ್ದಾರೆ.








