ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಗೆ ಟೀಮ್ ಇಂಡಿಯಾದ ಹನ್ನೊಂದರ ಬಳಗ…?
ಫೆಬ್ರವರಿ 5ರಿಂದ ಚೆನ್ನೈ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ.
ಬಲಿಷ್ಠ ತಂಡಗಳ ನಡುವಿನ ಈ ಹೋರಾಟವನ್ನು ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಆದ್ರೆ ಎರಡನೇ ಟೆಸ್ಟ್ ಪಂದ್ಯದ ಬಳಿಕ ಶೇ.50ರಷ್ಟು ಪ್ರೇಕ್ಷಕರು ಮೈದಾನದಲ್ಲಿ ಪಂದ್ಯವನ್ನು ವೀಕ್ಷಣೆ ಮಾಡಬಹುದು.
ಈ ನಡುವೆ, ಟೀಮ್ ಇಂಡಿಯಾದ ಹನ್ನೊಂದರ ಬಳಗದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲವಂತೂ ಇದ್ದೇ ಇದೆ. ಹಾಗೇ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವುದು ಕೂಡ ಟೀಮ್ ಮ್ಯಾನೇಜ್ ಮೆಂಟ್ ಗೆ ತಲೆನೋವಾಗಿ ಪರಿಣಮಿಸಿದೆ.
ಆರಂಭಿಕ ಸ್ಥಾನದಲ್ಲಿ ಯುವ ಬ್ಯಾಟ್ಸ್ ಮೆನ್ ಶುಬ್ಮನ್ ಗಿಲ್ ಭರವಸೆ ಮೂಡಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಜೊತೆ ಗಿಲ್ ಇನಿಂಗ್ಸ್ ಆರಂಭಿಸೋದು ಬಹುತೇಕ ಪಕ್ಕವಾಗಿದೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ವಾರಿಯರ್ ಚೇತೇಶ್ವರ್ ಪೂಜಾರ ಕಣಕ್ಕಿಳಿಯಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ, ಐದನೇ ಕ್ರಮಾಂಕದಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ಹಾಗೂ ಆರನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ಇಳಿಯಲಿದ್ದಾರೆ.
ಸ್ಪಿನ್ನರ್ ಕೋಟಾದಲ್ಲಿ ಆರ್. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕುಲದೀಪ್ ಯಾದವ್ ಹೊರಗುಳಿಯಲ್ಲಿದ್ದಾರೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬೂಮ್ರಾ ಮುಂಚೂಣಿಯಲ್ಲಿದ್ದಾರೆ. ಆದ್ರೆ ಇನ್ನುಳಿದ ಎರಡು ಸ್ಥಾನಗಳಿಗೆ ಪೈಪೋಟಿ ಇದೆ. ಅನುಭವಿ ವೇಗಿ ಇಶಾಂತ್ ಶರ್ಮಾ, ಶಾರ್ದೂಲ್ ಥಾಕೂರ್, ಮಹಮ್ಮದ್ ಸಿರಾಜ್ ನಡುವೆ ಪೈಪೋಟಿ ಇದೆ.
ಇನ್ನು ಹನ್ನೊಂದರ ಬಳಗದಲ್ಲಿ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅಚ್ಚರಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ಮೊದಲ ಟೆಸ್ಟ್ ಪಂದ್ಯಕ್ಕೆ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸುವ ಯೋಚನೆಯೂ ಇದ್ದೇ ಇದೆ. ಒಂದು ವೇಳೆ ಮೂವರು ಸ್ಪಿನ್ನರ್ ಗಳು ಕಣಕ್ಕಿಳಿದ್ರೆ ಕುಲದೀಪ್ ಯಾದವ್ ಗೆ ಅವಕಾಶವಿದೆ. ಆಗ ಬೂಮ್ರಾ ಜೊತೆ ಇಶಾಂತ್ ಶರ್ಮಾ ವೇಗದ ಬೌಲಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು.
ಈ ನಡುವೆ, ಕೆ.ಎಲ್. ರಾಹುಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.
ಟೀಮ್ ಇಂಡಿಯಾದ ಮೊದಲ ಟೆಸ್ಟ್ ಪಂದ್ಯಕ್ಕೆ ಸಂಭವನೀಯ ತಂಡ
ಶುಬ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರಿತ್ ಬೂಮ್ರಾ, ಇಶಾಂತ್ ಶರ್ಮಾ, ಶಾರ್ದೂಲ್ ಥಾಕೂರ್.