ಬೆಂಗಳೂರು : ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಿಎಂ ಪರಿಹಾರ ನಿಧಿಗೆ ಕನ್ನಡ ಚಿತ್ರರಂಗದ ತಾರೆಯರು ಹಣ ಸಹಾಯ ಮಾಡುತ್ತಿದ್ದಾರೆ. ಅದರಂತೆ ಇದೀಗ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಪರಿಹಾರ ಮೊತ್ತ ಹಸ್ತಾಂತರಿಸಿದ್ದಾರೆ.
ವಿಜಯ್ ಪ್ರಕಾಶ್ ಹೇಳಿದ್ದೇನು?
ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಬಳಿಕ ಸಂತಸ ಹಂಚಿಕೊಂಡಿರುವ ಅವರು, ”ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಅಂತ ಪುರಂದರ ದಾಸರು ಹೇಳಿರುವಂತ ಮಾತು, ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಆ ಪ್ರೀತಿಯ ಬೊಗಸೆಯನ್ನ ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಮಾಡೋದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
”ಕೊರೊನಾ ಮಹಾಮಾರಿಯನ್ನ ನಾವೆಲ್ಲರೂ ಮನೆಯೊಳಗಿದ್ದು ಎದುರಿಸುತ್ತಿದ್ದರೆ, ಹೊರಗಡೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದ ಎಲ್ಲ ಅಧಿಕಾರಿಗಳು, ಡಾಕ್ಟರ್ಸ್ ಹಾಗೂ ಅವರ ತಂಡ, ಪೊಲೀಸರು ಹೀಗೆ ಹಗಲು ರಾತ್ರಿ ನಮ್ಮನ್ನ ಈ ಒಂದು ಮಹಾಮಾರಿಯಿಂದ ರಕ್ಷಿಸಲು ಕೆಲಸ ಮಾಡ್ತಾ ಇದ್ದಾರೆ. ಇಂಥ ಒಂದು ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಕೈಯಲ್ಲಿ ಆದಷ್ಟು ಪರಿಹಾರ ನಿಧಿಗೆ ಕೊಟ್ಟರೆ ಅದು ಎಲ್ಲಿಯೋ ಯಾರೋ ಒಬ್ಬರ ಪ್ರಾಣವನ್ನ ಉಳಿಸಲು ಅನುಕೂಲವಾಗಬಹುದು ಎಂದು ಭಾವಿಸುತ್ತೇನೆ. ನನ್ನ ಪ್ರಾರ್ಥನೆ, ನಿಮ್ಮ ಕೈಯಲ್ಲಿ ಆದಷ್ಟು ಕೊಡುಗೆಯನ್ನ ಈ ಪರಿಹಾರ ನಿಧಿಗೆ ಮಾಡಿ. ನಿಮ್ಮಿಂದ ಯಾರೋ ಒಬ್ಬರ ಜೀವ ಉಳಿಯಲಿಕ್ಕೆ ಸಾಧ್ಯವಾಗುತ್ತೆ” ಎಂದು ಮನವಿ ಮಾಡಿದ್ದಾರೆ.








