ಇಟಲಿ: ಇಟಲಿಯಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಾಲ್ಯ ಸ್ನೇಹಿತೆ ಪತ್ರಿಚಿಯಾಗೆ ಕೋವಿಡ್ -19 ಪಾಸಿಟಿವ್ ಇರೋದು ದೃಢಪಟ್ಟಿದೆ. ಅವರು ಸೋನಿಯಾ ಗಾಂಧಿ ಹುಟ್ಟೂರು ರಿವೊಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇಟಲಿಯಲ್ಲಿ ಪ್ರೊಫೆಷನಲ್ ನರ್ಸ್ ಆಗಿರುವ ಕನ್ನಡಿಗ ಹೇಮೇಗೌಡ, ರಿವೊಲಿ ಆಸ್ಪತ್ರೆಯಲ್ಲಿ ಪತ್ರಿಚಿಯಾಗೆ ಚಿಕಿತ್ಸೆ ನೀಡ್ತಿದ್ದಾರೆ.
ಹೇಮೇಗೌಡ ಭಾರತೀಯರೆಂಬ ಕಾರಣಕ್ಕೆ ಪತ್ರಿಚಿಯಾ ಅವರು ಕೊರೊನಾದಿಂದ ಬಳಲುತ್ತಿದ್ದರೂ 15 ನಿಮಿಷಗಳ ಕಾಲ ಸೋನಿಯಾಗಾಂಧಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
“ಸೋನಿಯಾ ಗಾಂಧಿ ಶಾಲೆಯಲ್ಲಿ ಅತ್ಯಂತ ಸಾಮಾನ್ಯ, ಸರಳ ವ್ಯಕ್ತಿತ್ವದವರಾಗಿದ್ರು. ಯಾವುದೇ ರೀತಿಯ ಆಡಂಬರ ಮಾಡ್ತಿರಲಿಲ್ಲ. ನಾವೆಲ್ಲಾ ಜೊತೆಯಲ್ಲೇ ಕ್ಲಾಸ್ ಗಳಿಗೆ ಹೋಗ್ತಿದ್ವಿ. ರಾಜೀವ್ ಗಾಂಧಿ ಕೂಡ ತುಂಬಾ ಸರಳ ವ್ಯಕ್ತಿಯಾಗಿದ್ರು. ಅವರು ಪ್ರಧಾನ ಮಂತ್ರಿಯಾಗಿದ್ದಾಗಲೂ ಇಲ್ಲಿಗೆ ಬಂದಿದ್ರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ರೂ ಯಾವುದೇ ಆಡಂಬರ ಮಾಡ್ತಿರಲಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಎಲ್ಲರೊಂದಿಗೆ ಬೆರೆತು ಮಾತನಾಡಿಸಿಕೊಂಡು ಹೋಗ್ತಿದ್ರು ಎಂದು ರಾಜೀವ್ ಗಾಂಧಿ ಅವರ ಸ್ಮರಣೆಮಾಡಿಕೊಂಡಿದ್ದಾರೆ.
ಇನ್ನು ಸೋನಿಯಾ ಗಾಂಧಿ ಹುಟ್ಟೂರಿನವರಾದ ನಾವು ಇವತ್ತಿಗೂ ಸೋನಿಯಾ ಗಾಂಧಿ, ರಾಜೀವ್ ಗಾಂಧಿ & ರಾಹುಲ್ ಗಾಂಧಿಯನ್ನು ಹೃದಯದಲ್ಲಿಟ್ಟುಕೊಂಡಿದ್ದೇವೆ. ನೀವು ಭಾರತಕ್ಕೆ ಏನೆಲ್ಲಾ ಮಾಡ್ತಿದ್ದೀರಿ ಅದರ ಬಗ್ಗೆ ತುಂಬಾ ಗೌರವ, ಖುಷಿಯಿದೆ. ಅಲ್ಲದೇ, ಟರಿಯನ್ ನಗರದ ರಸ್ತೆಯೊಂದಕ್ಕೆ ರಾಜೀವ್ ಗಾಂಧಿ ಹೆಸರನ್ನಿಟ್ಟು ಇಟಲಿಯನ್ನರು ಗೌರವ ಕೊಟ್ಟಿದ್ದಾರೆ ಎಂದು ಪತ್ರಿಚಿಯಾ ಹೇಳಿದ್ದಾರೆ.
“ಭಾರತೀಯರನ್ನು ತುಂಬಾ ಪ್ರೀತಿಸ್ತಾರೆ”
ಪತ್ರಿಚಿಯಾ ಅವರ ಜೊತೆ ಮಾತನಾಡಿದ ಬಳಿಕ ಕನ್ನಡಿಗ ಹೇಮೇಗೌಡ ವಿಡಿಯೋ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಸೋನಿಯಾ ಗಾಂಧಿ ನಿಮಿತ್ತ ಇಟಲಿಯನ್ನರು ಇಲ್ಲಿ ಕೆಲಸ ಮಾಡುವ ಭಾರತೀಯರನ್ನು ತುಂಬಾ ಪ್ರೀತಿಸ್ತಾರೆ ಎಂದಿದ್ದಾರೆ. ಅಲ್ಲದೆ ಕೊರೊನಾ ಬಗ್ಗೆ ಎಲ್ಲಾ ಭಾರತೀಯರಿಗೆ ಮುಂಜಾಗ್ರತೆ ವಹಿಸುವಂತೆ ಕರೆ ಕೊಟ್ಟಿದ್ದಾರೆ.








