ವಾಷಿಂಗ್ಟನ್: ಕೊರೊನಾ ಹೊಡೆತಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾ ತತ್ತರಿಸಿ ಹೋಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್, ಕೊವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಿಸುವ ಔಷಧವಾಗಿದೆ. ಅಮೆರಿಕಾದಲ್ಲಿ ಇರುವ ವೈರಸ್ ಸೋಂಕಿತರಿಕೆ ಚಿಕಿತ್ಸೆ ನೀಡುವ ಸಲುವಾಗಿ ಔಷಧ ರಫ್ತು ಮಾಡುವಂತೆ ಮೋದಿಯವರ ಬಳಿ ಮನವಿ ಮಾಡಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹೈಡ್ರೋಕ್ಲೋರೋಕ್ವಿನ್ ಔಷಧಿ ಕುರಿತು ವೈದ್ಯರ ಬಳಿ ಚರ್ಚಿಸಿದ್ದೇನೆ. ವೈರಸ್ ವಿರುದ್ಧ ಹೋರಾಟಲು ಭಾರತ ಶ್ರಮಿಸುತ್ತಿದೆ. ಮಲೇರಿಯಾಗೆ ಬಳಸುವ ಹೈಡ್ರೋಕ್ಲೋರೊಕ್ವಿನ್ ಔಷಧವನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತಿದೆ. ಭಾರತದ ಬಳಿ ಹೈಡ್ರೋಕ್ಲೋರೊಕ್ವಿನ್ ಔಷಧಿ ದಾಸ್ತಾನು ಸಾಕಷ್ಟಿದೆ. ಹೀಗಾಗಿ ಅಮೆರಿಕಾಗೂ ಸ್ವಲ ಔಷಧಿ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.








