ಟೀಮ್ ಇಂಡಿಯಾ ಸರಣಿ ಗೆದ್ದಿರಬಹುದು.. ಆದ್ರೆ ಗೆದ್ದಿದ್ದು ಹೇಗೆ ? ಇದು ಆತ್ಮಾವಲೋಕನ ಸಮಯ…!
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಗೆ ಎಂಟ್ರಿಕೊಟ್ಟಿರಬಹುದು.. !
ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿರಬಹುದು…!
ಇದೀಗ ಭಾರತದ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿರಬಹುದು… !
ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಯಶಸ್ಸಿನ ಉತ್ತುಂಗದಲ್ಲಿ ತೇಲಾಡುತ್ತಿರಬಹುದು..!
ಟೀಮ್ ಇಂಡಿಯಾದ ಸಾಂಘಿಕ ಆಟವನ್ನಾಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು..!
ವಿಶ್ವದ ಯಾವುದೇ ತಂಡವನ್ನಾದ್ರೂ ಸರಿ ಸೋಲಿಸುವ ಸಾಮಥ್ರ್ಯ ಟೀಮ್ ಇಂಡಿಯಾಗಿದೆ ಎಂದು ಅಂದುಕೊಳ್ಳಬಹುದು,,,!
ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂತ್ ತುಂಬಾನೇ ಬಲಿಷ್ಠವಾಗಿದೆ ಎಂದು ಸುಲಭವಾಗಿ ಹೇಳಬಹುದು..!
ಗೆದ್ದಾಗ ಎಲ್ಲವೂ ಸರಿಯಾಗಿಯೇ ಇದೆ.. ಆದ್ರೆ ಸೋತಾಗ ಈ ಪ್ರಶ್ನೆಗಳು, ಉತ್ತರಗಳು ಯಾವುದು ಬರಲ್ಲ. ಯಾಕಂದ್ರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಾಗ ಯಾವ ರೀತಿಯ ಟೀಕೆ, ಆರೋಪಗಳು ಬಂದಿವೆ ಎಂಬುದನ್ನು ಕೂಡ ನೆನಪಿಸಿಕೊಳ್ಳಬೇಕಿದೆ.
ನೆನಪಿಡಿ.. ನಾವು ಗೆದ್ದಾಗ ಕೊಂಡಾಡಿ ಆಗಸದಲ್ಲಿ ತೇಲಾಡಿಬಿಡುತ್ತೇವೆ. ಹಾಗೇ ಸೋತಾಗ ಪ್ರಪಾತಕ್ಕೆ ಕುಸಿದುಬೀಳುವಂತೆ ಮಾಡುತ್ತೇವೆ. ಇದು ಟೀಮ್ ಇಂಡಿಯಾ ಆಟಗಾರರಿಗೂ ಗೊತ್ತು.. ಆದ್ರೆ ನಮ್ಮ ಟೀಮ್ ಇಂಡಿಯಾ ಹುಡುಗರು ತಲೆಕೆಡಿಸಿಕೊಳ್ಳುವುದಿಲ್ಲ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಕೆಲವು ಆಟಗಾರರು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಮತ್ತೆ ಕೆಲವರು ನಿರಾಸೆಗೊಳಿಸಿದ್ದಾರೆ. ಹಾಗೇ ಮತ್ತೆ ಕೆಲವರು ತಪ್ಪಿನಿಂದ ಎಚ್ಚೆತ್ತುಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ.
ಆದ್ರೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ. ಗೆದ್ದಿದ್ದು ದೊಡ್ಡ ವಿಚಾರವಾದ್ರೂ ಎಲ್ಲಿ ಎಡವಿದ್ದೇವೆ ಎಂಬುದನ್ನು ಕೂಡ ತಿಳಿದುಕೊಳ್ಳಬೇಕಿದೆ.
ಹಾಗೇ ನೋಡಿದ್ರೆ ಈ ಎರಡು ಸರಣಿಗಳಲ್ಲೂ ಟೀಮ್ ಇಂಡಿಯಾಗೆ ಉತ್ತಮ ಆರಂಭಿಕ ಜೊತೆಯಾಟಗಳು ಬಂದಿಲ್ಲ. ಶುಬ್ಮನ್ ಗಿಲ್ ಭರವಸೆ ಮೂಡಿಸಿದ್ರೂ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಅನುಭವಿ ರೋಹಿತ್ ಶರ್ಮಾ ಫಾರ್ಮ್ ಕಂಡುಕೊಂಡಿರುವುದು ಸಮಾಧಾನಕರ ಸಂಗತಿ.
ಹಾಗೇ ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಕ್ರೀಸ್ ಗೆ ಅಂಟಿಕೊಂಡು ಬ್ಯಾಟ್ ಮಾಡಿದ್ರೂ ಹೆಚ್ಚಿನ ರನ್ ಗಳು ಹರಿದು ಬಂದಿಲ್ಲ.
ಇನ್ನು ಶತಕದ ಮೇಲೆ ಶತಕ ದಾಖಲಿಸುತ್ತಿದ್ದ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಧಾರಾಳವಾಗಿ ರನ್ ಗಳು ಹರಿದುಬಂದಿಲ್ಲ. ಶತಕ ದಾಖಲಿಸದೇ ವರ್ಷಗಳೇ ಕಳೆದುಹೋಗಿವೆ. ಈ ಸರಣಿಯಲ್ಲಿ ಎರಡು ಬಾರಿ ಸೋನ್ನೆ ಸುತ್ತಿದ್ದಾರೆ.
ಮತ್ತೊಂದೆಡೆ ಉಪನಾಯಕ ಅಜಿಂಕ್ಯ ರಹಾನೆ ಕೂಡ ಫಾರ್ಮ್ ಕಳೆದುಕೊಂಡಿದ್ದಾರೆ. ರಹಾನೆ ಆಸ್ಟ್ರೇಲಿಯಾ ಸರಣಿಯಲ್ಲಿ ನಾಯಕನಾಗಿ ಸರಣಿ ಗೆಲ್ಲಿಸಿಕೊಟ್ರೂ ಕೂಡ ಇಂಗ್ಲೆಂಡ್ ಸರಣಿಯಲ್ಲಿ ಫುಲ್ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಆದ್ರೆ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳ ಬಗ್ಗೆ ಹೇಳುವುದೇ ಬೇಡ. ತಪ್ಪಿನಿಂದ ಪಾಠ ಕಲಿತಿರುವ ರಿಷಬ್ ಪಂತ್ ಅಪಾಯಕಾರಿ ಬ್ಯಾಟ್ಸ್ ಮೆನ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಆರನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ರನ್ ಗತಿಯನ್ನು ಏರಿಸುತ್ತಿದ್ದಾರೆ. ಇದು ಎರಡೂ ಸರಣಿಗೂ ಪ್ಲಸ್ ಪಾಯಿಂಟ್ ಆಗಿದೆ.
ಅದೇ ರೀತಿ ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಅಶ್ವಿನ್ ಕೂಡ ಸಮಯೋಚಿತ ಆಟವನ್ನಾಡಿ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ಆಲ್ ರೌಂಡ್ ಆಟದ ಮೂಲಕ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಗೇ ನೋಡಿದ್ರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಪಿನ್ನರ್ ಗಳೇ ಪ್ರಮುಖ ಪಾತ್ರ ವಹಿಸಿದ್ದು, ಅಶ್ವಿನ್ ಮತ್ತು ಅಕ್ಸರ್ ಇಬ್ಬರು ಸೇರಿಕೊಂಡು 59 ವಿಕೆಟ್ ಗಳನ್ನು ಕಬಳಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದಿದ್ದಾರೆ. ಇನ್ನುಳಿದ ವಿಕೆಟ್ ಗಳು ವೇಗದ ಬೌಲರ್ ಗಳ ಪಾಲಾಗಿವೆ.
ಒಟ್ಟಾರೆಯಾಗಿ ಹೇಳುವುದಾದ್ರೆ, ಟೀಮ್ ಇಂಡಿಯಾದ ಈ ಸರಣಿಯ ಗೆಲುವಿನ ಪ್ರಮುಖ ರೂವಾರಿಗಳು ಆಲ್ ರೌಂಡರ್ ಗಳಾಗಿ ಹೊರಹೊಮ್ಮಿರುವ ಅಕ್ಸರ್ ಪಟೇಲ್, ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್. ಹಾಗೇ ವಿಕೆಟ್ ಕೀಪರ್ ರಿಷಬ್ ಪಂತ್ ಅಂತನೂ ಹೇಳಬಹುದು.
ಇದೀಗ ಅನುಭವಿ ಬ್ಯಾಟ್ಸ್ ಮೆನ್ ಗಳು ಫಾರ್ಮ್ ಕಂಡುಕೊಂಡ್ರೆ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ 9 ಮಂದಿ ಎದುರಾಳಿಗೆ ಸಿಂಹಸ್ವಪ್ನರಾಗಿ ಕಾಡುವಂತಹ ಬ್ಯಾಟ್ಸ್ ಮೆನ್ ಗಳು ಇದ್ದಾರೆ ಎಂಬುದನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಿಂದ ಕ್ರಿಕೆಟ್ ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ. ಶಾರ್ದೂಲ್ ಥಾಕೂರ್ ಕೂಡ ಟೆಸ್ಟ್ ತಂಡದ ಹನ್ನೊಂದರ ಬಳಗದಲ್ಲಿ ಜಸ್ಪ್ರಿತ್ ಬೂಮ್ರಾ ಮಾತ್ರ ಬ್ಯಾಟಿಂಗ್ ನಲ್ಲಿ ಸುಧಾರಣೆಯಾಗಬೇಕಿದೆ. ಇನ್ನುಳಿದಂತೆ ಎಲ್ಲರೂ ಪಕ್ಕಾ ಬ್ಯಾಟ್ಸ್ಮೆನ್ ಗಳಾಗಿಬಿಡುತ್ತಾರೆ.
ಇನ್ನೊಂದೆಡೆ ಸ್ಪರ್ಧಾತ್ಮಕ ದಿನಗಳಲ್ಲಿ ಒಬ್ಬ ಆಟಗಾರ ಅವಕಾಶವನ್ನು ಕಳೆದುಕೊಂಡ್ರೆ, ಮತ್ತೊಬ್ಬ ಆಟಗಾರ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಾನೆ ಎಂಬುದು ಕೂಡ ಟೀಮ್ ಇಂಡಿಯಾದ ಆಟಗಾರರಿಗೆ ಅರ್ಥವಾಗಿಬಿಟ್ಟಿದೆ.
ಹೀಗಾಗಿ ಗಾಯ, ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ದೂರ ಉಳಿದಿದ್ದ ಮಯಾಂಕ್ ಅಗರ್ ವಾಲ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜಾನಂತಹ ಆಟಗಾರರು ಕೂಡ 11ರ ಬಳಗದಲ್ಲಿ ಆಡಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.








