ಹಲವು ಆರೋಪ ಹೊತ್ತ ಡಿಕೆಶಿ ರಾಜೀನಾಮೆ ನೀಡಲಿ : ಶ್ರೀರಾಮುಲು ವಾಗ್ದಾಳಿ
ಗದಗ : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಸಚಿವ ಶ್ರೀರಾಮುಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ಹರಿಹಾಯ್ದಿದ್ದಾರೆ.
6 ಜನ ಸಚಿವರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ, ಕೋರ್ಟ್ ಮೊರೆ ಹೋದವರು ನೈತಿಕತೆ ಹೊಣೆ ಹೊತ್ತು ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ.
ಈ ಬಗ್ಗೆ ಗದಗದಲ್ಲಿ ಪ್ರತಿಕ್ರಿಯೆ ನೀಡಿರುವ ರಾಮುಲು, ಸಾಕಷ್ಟು ಆರೋಪಗಳನ್ನು ಹೊತ್ತ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಆಮೇಲೆ ನಮ್ಮ ಸಚಿವರು ರಾಜೀನಾಮೆ ಕೊಡುವ ಬಗ್ಗೆ ವಿಚಾರ ಮಾಡ್ತೇವೆ ಎಂದರು.
ಇನ್ನು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರೋ ಹಿಂದೆ ನಿಂತು ಕೆಲವು ಮಂದಿ ಮಾಡಿದ ಕೆಲಸ ಇದು. ಅವರು ಯಾರು ಅಂತ ಸರ್ಟಿಫಿಕೇಟ್ ಕೊಡೋದಕ್ಕೆ ನಾ ಕೂತಿಲ್ಲ.
ತನಿಖೆ ನಂತರ ಸತ್ಯಾ ಸತ್ಯತೆ ಹೊರಬೀಳುತ್ತೆ. ಕಾಂಗ್ರೆಸ್ ಬಿಟ್ಟು ಬಂದು ಬಿಜೆಪಿ ಸರಕಾರ ರಚನೆಗೆ ಕಾರಣರಾದ ಇವರ ತೇಜೋವಧೆ ಮಾಡಲಾಗ್ತಿದೆ, ಅವರ ರಾಜಕಾರಣಕ್ಕೆ ಕಳಂಕ ತರಲಾಗ್ತಿದೆ ಎಂದು ಹರಿಹಾಯ್ದರು.









