
ಬೆಂಗಳೂರು : ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು, ವರದಿಯಲ್ಲಿರುವಂತೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿರುವ ಬಂದ್‌ಗೆ ೪೦೦ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಬೆಳಗ್ಗೆ ೬ ರಿಂದ ಸಂಜೆ ೬ ಗಂಟೆಯ ತನಕ ಬಂದ್ ನಡೆಸಲಾಗುತ್ತದೆ. ಬಂದ್ ಅಂಗವಾಗಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಜಾಥಾ ನಡೆಸಲಾಗುತ್ತದೆ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಅವರು ಹೇಳಿದ್ದಾರೆ.
ಕರ್ನಾಟಕ ಬಂದ್‌ಗೆ ಕಾರ್ಮಿಕ ಸಂಘಟನೆಗಳು, ಸಿಐಟಿಯು ಸೇರಿದಂತೆ ೪೦೦ ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ನಮ್ಮ ಕನ್ನಡ ರಕ್ಷಣಾ ವೇದಿಕೆ, ಜಯಕರ್ನಾಟಕ, ಕರ್ನಾಟಕ ಸಂಘಟನೆಗಳ ಒಕ್ಕೂಟ, ಚಾಲಕರ ಸಂಘಟನೆಗಳ ಒಕ್ಕೂಟ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ಬೆಂಬಲಿಸಿವೆ.
ಏನ್ ಇರುತ್ತೆ..? ಏನ್ ಇರಲ್ಲ..?
ಬಂದ್‌ಗೆ ಬೆಂಬಲ ನೀಡುವ ಬಗ್ಗೆ ರಾಜ್ಯ ಸಾರಿಗೆ ನೌಕರರು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದ್ದರಿಂದ, ಸರ್ಕಾರಿ ಬಸ್‌ಗಳ ಸಂಚಾರ ಇರುತ್ತದೆ. ಹೋಟೆಲ್ ಮಾಲೀಕರ ಸಂಘ ಬಂದ್ ಬೆಂಬಲಿಸಿದೆ. ಹೋಟೆಲ್ ಬಂದ್ ಮಾಡಲಾಗುತ್ತದೆಯೇ? ಅಥವಾ ನೈತಿಕ ಬೆಂಬಲವೋ ಎನ್ನುವುದು ಖಚಿತವಾಗಿಲ್ಲ.
ಇನ್ನು ಬೀದಿ ಬದಿ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ, ತರಕಾರಿ, ಹೂವು, ಹಣ್ಣಿನ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಫೆಡರಲ್ ಅಸೋಸಿಯೇಶನ್ ಬಂದ್‌ಗೆ ನೈತಿಕ ಬೆಂಬಲ ನೀಡುವ ಸಾಧ್ಯತೆ ಇದೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಚಾಲಕರು ಬಂದ್ ಬೆಂಬಲಿಸಿದರೆ ಶಾಲಾ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಮಾಲ್, ಚಿತ್ರಮಂದಿರ ತೆರೆಯಬೇಕೆ ಎಂಬುದು ಇನ್ನೂ ಚರ್ಚೆಯ ಹಂತದಲ್ಲಿದೆ.








