ನವದೆಹಲಿ: ಕೊರೊನಾ ಸೋಂಕಿನ ಹೊಡೆತಕ್ಕೆ ಸಿಲುಕಿ ವಿಶ್ವವೇ ಸ್ತಬ್ಧವಾಗಿದೆ. ಕೊರೊನಾಗೆ ಔಷಧಿ ಕಂಡು ಹಿಡಿಯಲು ವಿಶ್ವದೆಲ್ಲಾ ದೇಶಗಳು ನಾನಾ ಪ್ರಯೋಗಗಳನ್ನು ಮಾಡುತ್ತಿವೆ. ಈ ಮಧ್ಯೆ ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಗೆ ಸಂಬಂಧಿಸಿದ ಕಚ್ಚಾವಸ್ತುಗಳನ್ನು ಪೂರೈಸಿದ ಭಾರತಕ್ಕೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಧನ್ಯವಾದ ಅರ್ಪಿಸಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ಅವರು’ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆಯನ್ನು ಮುಂದುವರಿಸಲು ನೀವು ಕಳುಹಿಸಿಕೊಟ್ಟಿರುವ ಕಚ್ಚಾವಸ್ತುಗಳನ್ನು ನಾವು ಸ್ವೀಕರಿಸುತ್ತೇವೆ. ಇದರಿಂದಾಗಿ ಬ್ರೆಜಿಲ್ ಗೆ ಕೋವಿಡ್ -19 ರೋಗಿಗಳಿಗೆ, ಮಲೇರಿಯ, ಚರ್ಮರೋಗ ಮತ್ತು ಸಂಧಿವಾತ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯ. ಬ್ರೆಜಿಲ್ ಜನರಿಗೆ ಇಂತಹ ಸಮಯೋಚಿತ ಸಹಾಯಕ್ಕಾಗಿ ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.








