‘ಯೋಗಿ ರಾಜ್ಯ’ದಲ್ಲಿ ಮತ್ತೊಂದು ಹೇಯ ಕೃತ್ಯ..!
ಉತ್ತರ ಪ್ರದೇಶ : ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ ಮರು ದಿನವೇ ಆಕೆಯ ತಂದೆ ಭೀಕ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಸಾಕಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
2 ದಿನಗಳ ಹಿಂದಷ್ಟೇ 13 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಸಂತ್ರಸ್ತೆಯನ್ನು ಅದೇ ಗ್ರಾಮದ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಸಂತ್ರಸ್ತ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಈ ನಡುವೆ ಇಂದು ಮುಂಜಾನೆ ಆಸ್ಪತ್ರೆ ಹೊರಾಂಗಣದಲ್ಲಿ ಬಾಲಕಿಯ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇನ್ನೂ ಗ್ಯಾಂಗ್ ರೇಪ್ ನ ಪ್ರಕರಣದ ಪ್ರಮುಖ ಆರೋಪಿ ಗೊಲು ಯಾದವ್ ಎಂಬಾತನ ತಂದೆ ಕನೌ ಜ್ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಆರೋಪಿ ಗೋಲು ಯಾದವ್ ನನ್ನು ಬಂಧಿಸಲಾಗಿದೆ. ಆದ್ರೆ ಕೇಸ್ ದಾಖಲು ಮಾಡಿದಾಗಿನಿಂದಲೂ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಸಂತ್ರಸ್ತೆ ತಂದೆ ಮೃತಪಟ್ಟಿದ್ದು, ಇದು ಅಪಘಾತವಲ್ಲ ಕೊಲೆ ಎಂದು ಮೃತ ವ್ಯಕ್ತಿಯ ತಂದೆ ಆರೋಪಿಸಿದ್ದಾರೆ.
ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನಡೆಯುವಾಗ ತಂದೆ ಟೀ ತರಲೆಂದು ಹೊರಗಡೆ ಬಂದಾಗ ಅಪಘಾತ ಸಂಭವಿಸಿದೆ. ತಕ್ಷಣ ಕಾನ್ಪುರ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.








