ಆಕೆಗೆ ಪೊಲೀಸ್ ಠಾಣೆಯೆ ಮನೆ.. ಪೊಲೀಸ್ ಸಿಬ್ಬಂದಿಗಳೇ ಕುಟುಂಬ..
ಮಂಗಳೂರು, ಮಾರ್ಚ್18: ನಾವು ಆಗಾಗ್ಗೆ ಪೊಲೀಸ್ ದೌರ್ಜನ್ಯದ ಬಗ್ಗೆ ಕೇಳುತ್ತೇವೆ. ಇದರಿಂದಾಗಿ ಜನರು ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ. ಆದರೆ, 60 ವರ್ಷದ ಮಹಿಳೆಯೊಬ್ಬರಿಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯೆ ಮನೆಯಾಗಿದೆ. ಬಂದರು ಠಾಣೆಯ ಪೊಲೀಸ್ ಸಿಬ್ಬಂದಿಗಳೇ ಆಕೆಯ ಕುಟುಂಬ.
ಸುಮಾರು 40 ವರ್ಷಗಳ ಹಿಂದೆ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ ಮಾತುಬಾರದ ಕಿವಿ ಕೇಳದ ಈ ಅನಾಥ ಮಹಿಳೆಗೆ ಪೊಲೀಸ್ ಸಿಬ್ಬಂದಿಗಳು ಇಟ್ಟ ಹೆಸರು ಹೊನಮ್ಮ.

ಆಕೆಯ ಸಂಬಂಧಿಕರ ಯಾವುದೇ ಕುರುಹು ಸಿಗದ ಹಿನ್ನೆಲೆಯಲ್ಲಿ, ಆಗಿನ ಪೊಲೀಸ್ ಸಿಬ್ಬಂದಿ ಹೊನಮ್ಮಗೆ ಠಾಣೆಯಲ್ಲಿಯೇ ಆಶ್ರಯ ನೀಡಿದ್ದು, ಅದು ಈಗ ಆಕೆಯ ಮನೆಯಾಗಿದೆ.
ವಿಶೇಷವೆಂದರೆ, ಆಕೆಯ ಎಲ್ಲಾ ದಾಖಲೆಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆಗಳು ಬಂದರು ಪೊಲೀಸ್ ಠಾಣೆ ವಿಳಾಸವನ್ನು ಸಂವಹನ ವಿಳಾಸವಾಗಿ ಹೊಂದಿವೆ. ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಒಂದು ಕೋಣೆಯನ್ನು ಹೊನಮ್ಮನ ಮನೆಯಾಗಿ ಮಾರ್ಪಡಿಸಲಾಗಿದೆ. ಆಕೆ ಪೊಲೀಸ್ ಠಾಣೆಯಲ್ಲಿಯೇ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಆರಂಭದಲ್ಲಿ, ಹೊನಮ್ಮ ಠಾಣೆಯಲ್ಲಿ ಶುಚಿಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಕಾಲು ನೋವಿನ ಸಮಸ್ಯೆಗಳನ್ನು ಹೊಂದಿದ್ದರಿಂದ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ನಿಯೋಜಿಸಲಾಗಿದೆ.

ಹೊನಮ್ಮ ವರ್ಷಗಳಿಂದ ಠಾಣೆಯಲ್ಲಿ ಎಲ್ಲರೊಂದಿಗೆ ತನ್ನನ್ನು ಪರಿಚಯ ಮಾಡಿಕೊಂಡಿದ್ದಾರೆ ಮತ್ತು ಕೈ-ಸಂಕೇತ ಭಾಷೆಯೊಂದಿಗೆ ಸಿಬ್ಬಂದಿಯೊಂದಿಗೆ ಪರಿಣಾಮಕಾರಿಯಾಗಿ ಸಂವಹನ ಮಾಡುತ್ತಾರೆ. ಪೊಲೀಸರು ಆಕೆಯನ್ನು ತಮ್ಮದೇ ಕುಟುಂಬ ಸದಸ್ಯೆಯಂತೆ ನೋಡಿಕೊಳ್ಳುತ್ತಾರೆ ಮತ್ತು ಇತ್ತೀಚೆಗೆ ಪೊಲೀಸ್ ಆಯುಕ್ತರು ಪೊಲೀಸ್ ಸಿಬ್ಬಂದಿಗಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಆಕೆ ಭಾಗವಹಿಸಿದ್ದರು.
ಯಾವುದೇ ವಿಶೇಷ ಸಂದರ್ಭವಿದ್ದರೂ ಪೊಲೀಸರು ಆಕೆಯನ್ನು ಆಹ್ವಾನಿಸುತ್ತಾರೆ ಮತ್ತು ಸೀರೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಯಾವುದೇ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾದಾಗಲೆಲ್ಲಾ ಪೋಲಿಸರು ಆಕೆಯ ಕಾಳಜಿ ವಹಿಸುತ್ತಾರೆ.
https://twitter.com/SaakshaTv/status/1370206789032161285?s=19
https://twitter.com/SaakshaTv/status/1370171570254143488?s=19
https://twitter.com/SaakshaTv/status/1370217506338705408?s=19
https://twitter.com/SaakshaTv/status/1371710682882662403?s=19








