ಬೆಂಗಳೂರು: ಕೊರೊನಾದಿಂದಾಗಿ ಜನರ ಬದುಕು ಬರ್ಬಾದ್ ಆಗಿದ್ದು, ಜೀವನ ಸಾಗಿಸಲು ಪರಿತಪಿಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಜನರ ಮಧ್ಯೆ ಇದ್ದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದ್ದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ತಮ್ಮ ಈಜುಕೊಳದಲ್ಲಿ ಈಜುತ್ತಾ ಆಡುತ್ತಾ ಮಸ್ತಿ ಮಾಡಿದ್ದಾರೆ.
ಸಚಿವ ಸುಧಾಕರ್ ಅವರು ತಮ್ಮ ಕುಟುಂಬಿಕರೊಂದಿಗೆ ಈಜುಕೊಳದಲ್ಲಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಸಮಯದ ನಂತರ ಮಕ್ಕಳೊಂದಿಗೆ ಈಜುತ್ತಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಪಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಸಚಿವರ ಈ ಟ್ವೀಟ್ ಗೆ ಭಾರಿ ಟೀಕೆ ವ್ಯಕ್ತವಾಗಿದ್ದು, ಸರಕಾರದ ಪ್ರತಿನಿಧಿಯಾಗಿ ಇಂತಹ ಸಂಕಷ್ಟದ ಸಮಯದಲ್ಲಿ ಈಜು ಕೊಳದಲ್ಲಿ ನಿಮ್ಮ ಅಂತರ ಅಯ್ಯೋ ದೇವರೆ, ಎಲ್ಲಾ ವೈದ್ಯರೂ ಮತ್ತು ಪೊಲೀಸ್ ಇಲಾಖೆಯವರು ಕಷ್ಟ ಪಡುವಾಗ ಇದೆಲ್ಲಾ ಬೇಕಿತ್ತಾ, ಇದನ್ನು ಇಂತಹ ಸಮಯದಲ್ಲಿ ಪೋಸ್ಟ್ ಮಾಡುವ ಅವಶ್ಯಕತೆಯಿರಲಿಲ್ಲ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಹೀಗೆ ಸಚಿವರ ಟ್ವೀಟ್ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಕೆ. ಸುಧಾಕರ್ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.








