ಉತ್ತರಪ್ರದೇಶ : 10 ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ – ವಿಷ ಕೊಟ್ಟು ಸಾಯಿಸಿದ ಕ್ರೂರಿಗಳು..!
ಉತ್ತರ ಪ್ರದೇಶ : ಉತ್ತರಪ್ರದೇಶದಲ್ಲಿ ಹೆಣ್ಮಕ್ಕಳು , ಮಹಿಳೆಯರು, ಪುಟ್ಟ ಬಾಲಕಿಯರು , ಯುವತಿಯರು ಬದುಕುವುದು ತೀರಾ ಕಷ್ಟವಾಗಿ ಹೋಗಿದೆ. ಪ್ರತಿನಿತ್ಯ ಅಪರಾಧಗಳ ಸಂಖ್ಯೆ ಏರಿಕೆಯಾಗ್ತಲೇ ಇದೆ. ಅದ್ರಲ್ಲೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಂತಹ ಕೇಸ್ ಗಳೇ ಹೆಚ್ಚಾಗಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದೀಗ ಮತ್ತೆ ಅಂತಹದ್ದೇ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ.
10ನೇ ತರಗತಿಯ ವಿದ್ಯಾರ್ಥಿನಿ ಟ್ಯೂಷನ್ ಗೆ ತೆರಳುತ್ತಿದ್ದ ವೇಳೆ ಆಕೆಯನ್ನು ಅಪಹರಿಸಿರುವ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಆಕೆಗೆ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಮೀರತ್ ನ ಸರ್ಧಾನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಲ್ವರು ರಾಕ್ಷಸರು ಆಕೆಯ ಮೇಲೆ ಮೃಗಗಳಂತೆ ಎರಗಿಬಿದ್ದಿವೆ. ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಆಕೆಗೆ ಬಲವಂತವಾಗಿ ವಿಷಪ್ರಾಶನ ಮಾಡಿಸಿ ಕೊಲೆಗೈದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಕುಟುಂಬ ಸದಸ್ಯರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ದೂರು ದಾಖಲಿಸಿದ್ದಾರೆ. ಅಲ್ಲದೇ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ಧಾರೆ. ಬಂಧಿತನನ್ನ ದಬೀಶ್ ಜರಿಯಮಾಲಾ ಎಂದು ಗುರುತಿಸಲಾಗಿದೆ. ಇನ್ನುಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.








