ಲಖನೌ: ಪತಿ ಜೊತೆಗಿನ ಜಗಳದಿಂದ ಆಕ್ರೋಶಗೊಂಡ ಪತ್ನಿ ಐವರು ಮಕ್ಕಳನ್ನು ಗಂಗಾ ನದಿಗೆ ಎಸೆದಿರುವ ಘಟನೆ ಉತ್ತರಪ್ರದೇಶದ ಭಾದೋಹಿ ಪ್ರದೇಶದಲ್ಲಿ ನಡೆದಿದೆ. ಸದ್ಯ ಗಂಗಾನದಿಯಲ್ಲಿ ಮಕ್ಕಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಈ ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದಾನ್ ಸಿಂಗ್ ವಿವರಿಸಿದ್ದು, ಜಹಾಂಗೀರಾಬಾದ್ ಗ್ರಾಮದ ಗೋಪಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡ ರಾತ್ರಿ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.
https://twitter.com/PibLucknow/status/1249550645092216836
ಕಳೆದ ಒಂದು ವರ್ಷದಿಂದ ಪತಿ ಮಂಜು ಯಾದವ್, ಹಾಗೂ ಪತಿ ಮೃದುಲ್ ಯಾದವ್ ನಡುವೆ ಗಲಾಟೆ ನಡೆಯುತ್ತಿತ್ತಂತೆ.ಅದರಂತೆ ಶನಿವಾರ ರಾತ್ರಿ ಇಬ್ಬರ ನಡುವೆ ಗಲಾಟೆ ಹೆಚ್ಚಾಗಿದ್ದು, ಈ ವೇಳೆ ಕೋಪಗೊಂಡ ಪತ್ನಿ ಮಕ್ಕಳಾದ ಆರತಿ, ಸರಸ್ವತಿ, ಮಾತೇಶ್ವರಿ, ಶಿವಶಂಕರ್ ಹಾಗೂ ಕೇಶವ್ ಪ್ರಸಾದ್ ಸೇರಿದಂತೆ ಐವರು ಮಕ್ಕಳನ್ನು ಗಂಗಾನದಿಗೆ ಎಸೆದಿದ್ದಾಳೆ. ಅದು ತುಂಬಾ ಆಳವಾದ ಪ್ರದೇಶವಾಗಿದ್ದರಿಂದ ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. ಸ್ಥಳೀಯ ಮೀನುಗಾರರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯನಡೆಸಿದರೂ ಮಕ್ಕಳ ದೇಹ ಪತ್ತೆಯಾಗಿರಲಿಲ್ಲ ಎಂದು ವರದಿ ತಿಳಿಸಿದೆ.








