ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಾಕ್ ಡೌನ್ ಮೇ 3 ರವರೆಗೂ ಮುಂದುವರೆಸುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಲಾಕ್ ಡೌನ್ ಅನಿವಾರ್ಯ ಎಂದು ಹೇಳಿದ್ದರು. ಪಿ.ಎಂ ಮೋದಿ ಅವರ ಭಾಷಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ರೈತರು ಮತ್ತು ದಿನಗೂಲಿ ಸಮುದಾಯ ಸಾಕಷ್ಟು ತೊಂದರೆಯಲ್ಲಿದೆ. ಅವರಿಗಾಗಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು. ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿರುವುದಕ್ಕೆ ನಮ್ಮ ವಿರೋಧ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮದ್ದು. ಇದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ಆದರೆ ರೈತರು, ದಿನ ನಿತ್ಯ ಕೂಲಿ ಮಾಡುವವರಿಗೆ ಮೋದಿ ತಮ್ಮ ಭಾಷಣದಲ್ಲಿ ಏನನ್ನು ಘೋಷಣೆ ಮಾಡಿಲ್ಲ. ಕೃಷಿ ಸಾಲದ ಕಂತನ್ನು ಮೂರು ತಿಂಗಳ ನಂತರ ಬಡ್ಡಿ ಸಮೇತ ಮಾಡಿ ಎಂದರೆ ಯಾರಿಗೆ ಲಾಭವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಲಾಕ್ ಡೌನ್ ಘೋಷಣೆ ಮಾಡಿ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ಮೇಲೆ ಸಾಲ ತೀರಿಸಲು ಹೇಗೆ ಸಾಧ್ಯ. ಲಾಕ್ ಡೌನ್ ಅವಧಿ ಮುಗಿದ ಮೇಲೆ ಬಡ್ಡಿ ಸಮೇತ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೃಷಿ ಸಾಲವನ್ನೇ ಮನ್ನಾ ಮಾಡಬೇಕು ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.








