ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ, ಕೊರೊನಾ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದೆ.
ಇಂದು ಸಿಎಂ ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಡಾ.ಗಿರಿಧರ ಕಜೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆರಂಭಿಕವಾಗಿ 10 ರೋಗಿಗಳಿಗೆ ಪ್ರಾಯೋಗಿಕವಾಗಿ ಈ ಔಷಧ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಗಿರಿಧರ ಕಜೆ, ಆಯುರ್ವೇದಕ್ಕೆ ರಾಜ್ಯ ಸರ್ಕಾರ, ಸಿಎಂ ಮನ್ನಣೆ ಕೊಟ್ಟಿದ್ದು ಸಂತಸದ ವಿಷಯ. ಆರಂಭದಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲೇ ಆಯುರ್ವೇದದ ಗುಳಿಗೆ ನೀಡಲಾಗುವುದು. ಅದರ ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಎರಡೂ, ಮೂರು ದಿನಗಳಲ್ಲಿ ಇದು ಆರಂಭವಾಗಬಹುದು. ಸರ್ಕಾರದಿಂದ ಅಧಿಕೃತ ಆದೇಶ ಬಂದ ತಕ್ಷಣ ಈ ಔಷಧ ಪ್ರಯೋಗ ಆರಂಭವಾಗಲಿದೆ ಎಂದು ತಿಳಿಸಿದರು.








