ಬೆಂಗಳೂರು: ಕೊರೊನಾ ಸೋಂಕು ದೇಶವನ್ನೇ ತಲ್ಲಣಗೊಳಿಸಿದೆ. ಕೊರೊನಾ ಭೀತಿ ಒಂದು ಕಡೆಯಾದ್ರೆ ಲಾಕ್ ಡೌನ್ ಬಡವರನ್ನು ನರಕಕ್ಕೆ ತಳ್ಳಿದೆ. ಲಾಕ್ ಡೌನ್ ಹಿನ್ನೆಲೆ ಬಡ ಜನರು ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಇಂಥವರಿಗೆ ಈಗಾಗಲೇ ಹಲವರು ಸಹಾಯ ಮಾಡುತ್ತಿದ್ದಾರೆ. ಅದರಂತೆ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಫೌಂಡೇಷನ್ ಕರ್ನಾಟಕದ 6 ಸಾವಿರ ಸಿನಿ ಕಾರ್ಮಿಕರ ಕುಟುಂಬಗಳಿಗೆ ಸಹಾಯಹಸ್ತ ಚಾಚಿದೆ.
ರಿಲಯನ್ಸ್ ಫೌಂಡೇಷನ್ ವತಿಯಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯ ದಿನಗೂಲಿ ನೌಕರರಿಗೆ ಊಟ ಹಾಗೂ ಅಗತ್ಯ ವಸ್ತುಗಳನ್ನ ಪೂರೈಸಲು 2 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. ಈ ಹಿನ್ನೆಲೆ ಸಿಎಂ ಬಿ.ಎಸ್ ಯಡಿಯೂರಪ್ಪ, ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಷನ್ ಗೆ ಧನ್ಯವಾದ ತಿಳಿಸಿದ್ದಾರೆ.








