ನವದೆಹಲಿ : ಕೊರೊನಾ ಹೊಡೆತಕ್ಕೆ ವಿಶ್ವವೇ ಸ್ತಬ್ಧವಾಗಿದೆ. ಭಾರತದಲ್ಲೂ ಹೆಮ್ಮಾರಿ ಕೊರೊನಾ ಆತಂಕ ಸೃಷ್ಟಸಿದ್ದು, ವಿದೇಶಗಳಲ್ಲೂ ಭಾರತೀಯರು ಸಿಲುಕಿ ನಲುಗಿದ್ದಾರೆ. ಈ ಭಾರತೀಯರ ರಕ್ಷಣೆ ಯಾವಾಗ..? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ರದ್ದಾಗಿವೆ. ಹೀಗಾಗಿ ಮಧ್ಯಪ್ರಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರ ರಕ್ಷಣೆಗೆ ಧಾವಿಸಬೇಕಿದೆ. ಮಧ್ಯಪ್ರಾಚ್ಯದಲ್ಲಿ ಎಲ್ಲಾ ವ್ಯವಹಾರಗಳು ಹಾಗೂ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದ ಸಾವಿರಾರು ಭಾರತೀಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಹಿಂದೆ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿದ ರೀತಿಯಲ್ಲೇ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರನ್ನು ಮರಳಿ ಭಾರತಕ್ಕೆ ಕರೆತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.








