ಆಘಾತಕಾರಿ ಸುದ್ದಿ : ಬೆಂಗಳೂರಲ್ಲಿ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ರಾಕೇಟ್ ವೇಗದಲ್ಲಿ ಹೆಚ್ಚಾಗುತ್ತಿದ್ದು, ನಿನ್ನೆ ಬರೋಬ್ಬರಿ 39 ಸಾವಿರ ಕೇಸ್ ಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಇದರಲ್ಲಿ 29 ಸಾವಿರ ಬೆಂಗಳೂರಿನಲ್ಲೇ ಪತ್ತೆಯಾಗಿದ್ದು, 229 ಜನ ಒಂದೇ ದಿನ ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿವೊಂದು ಹೊರ ಬಿದ್ದಿದ್ದು, ನಗರದಲ್ಲಿ ಬರೋಬ್ಬರಿ 2 ಸಾವಿರದಿಂದ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರಂತೆ.
ಈ ಕುರಿತು ಸ್ವತಃ ಸಚಿವ ಆರ್.ಅಶೋಕ್ ಅವರೇ ಮಾಹಿತಿ ನೀಡಿದ್ದು, ನಗರದಲ್ಲಿ ಸುಮಾರು 2,000- 3,000 ಸೋಂಕಿತರು ನಾಪತ್ತೆಯಾಗಿದ್ದಾರೆ. ಇವರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಅಲ್ಲದೆ ಮೊಬೈಲ್ ಗಳನ್ನು ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಪೊಲೀಸರ ಸಹಾಯದಿಂದ ಅಧಿಕಾರಿಗಳು ಇಂತಹವರನ್ನು ಟ್ರೇಸ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದುವರೆದು ಸೋಂಕಿತರು ದಯವಿಟ್ಟು ಮೊಬೈಲ್ ಆಫ್ ಮಾಡಿಕೊಳ್ಳಬೇಡಿ, ಮನೆಗಳನ್ನು ತೊರೆಯಬೇಡಿ ಎಂದು ಮನವಿ ಮಾಡಿದ ಆರ್ ಅಶೋಕ್, ಸೋಂಕು ಪತ್ತೆಯಾದ ಆರಂಭದಲ್ಲಿ ಹೀಗೆ ನಾಪತ್ತೆಯಾದರೆ, ಐಸಿಯುಗೆ ಹೋಗುವ ಸ್ಥಿತಿ ಬರುತ್ತದೆ. ಆಗ ಮೊಬೈಲ್ ಆನ್ ಮಾಡಿಕೊಳ್ಳುತ್ತೀರಿ, ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿರುತ್ತದೆ. ಇದ್ದಕ್ಕಿದ್ದಂತೆ ಆಗಮಿಸಿ ಬೆಡ್ ಬೇಕು ಎಂದು ಕೇಳಿದಾಗ ಸಮಸ್ಯೆಯಾಗುತ್ತದೆ. ಹೀಗಾಗಿ ದಯವಿಟ್ಟು ಈ ರೀತಿ ಮಾಡಬೇಡಿ, ನಿಮ್ಮನ್ನು ಟ್ರ್ಯಾಕ್ ಮಾಡಲಿಕ್ಕೇ 10 ದಿನ ಬೇಕಾಗುತ್ತದೆ ಎಂದರು.










