ಕೊರೊನಾ ಮತ್ತು ನಿಂಬೆ ರಸ : ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದೇನು..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಕೇಟ್ ವೇಗದಲ್ಲಿ ಸಿಕ್ಕ ಸಿಕ್ಕ ದೇಹ ಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ. ಈ ಮಧ್ಯೆ ಮೂಗಿಗೆ ನಿಂಬೆ ರಸ ಹಾಕಿಸಿಕೊಂಡರೇ ಕೊರೊನಾ ಬರೋಲ್ಲ ಅನ್ನೋ ಸುದ್ದಿ ಕೂಡ ಭಾರಿ ಸದ್ದು ಮಾಡುತ್ತಿದೆ. ಅನೇಕ ಮಂದಿ ಈ ಸುದ್ದಿಯನ್ನ ನಂಬಿಕೊಂಡು ಮೂಗಿಗೆ ನಿಂಬೆ ರಸ ಹಾಕಿಸಿಕೊಂಡಿದ್ದಾರೆ.
ಇದೀಗ ಈ ಸಂಬಂಧ ಜಯದೇವ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಹೃದ್ರೋಗ ತಜ್ಞರಾಗಿರುವ ಡಾ.ಸಿ.ಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಏರ್ಪಡಿಸಿದ್ದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೇಚ್ಚರಿಕೆ ಎಂಬ ವೆಬಿನಾರ್ ಸಂವಾದದಲ್ಲಿ ಮಂಜುನಾಥ್ ಅವರು ಭಾಗಿಯಾಗಿ ಮಾತಾನಾಡಿದರು.
ಈ ವೇಳೆ ಕೊರೊನಾ ಮತ್ತು ನಿಂಬೆ ರಸ ವಿಚಾರವಾಗಿ ಮಾತನಾಡಿದ ಅವರು, ಜನರು ಇಂತಹ ಮೂಢನಂಬಿಕೆಗೆ ಒಳಗಾಗಬಾರದು ಅಂತ ಮನವಿ ಮಾಡಿದರು.
ಅಲ್ಲದೆ ಅಮೆರಿಕ, ಬ್ರೆಜಿಲ್ ದೇಶವನ್ನ ಹಿಂದಿಕ್ಕಿ ಸೋಂಕಿತರ ಸಂಖ್ಯೆಯಲ್ಲಿ ಭಾರತ ದೇಶ ಮುಂದಿದೆ. ವೈದ್ಯರೇ ರೋಗಿಗಳಾಗುತ್ತಿದ್ದು, ಸೆಕ್ಯೂರಿಟಿಗಳೇ ನಮ್ಮ ಟೆಂಪರೇಚರ್ ಟೆಸ್ಟ್ ಮಾಡುವ ಪರಿಸ್ಥಿತಿಗೆ ಬದಲಾಗಿದೆ. ಇಷ್ಟು ಮಾತ್ರವಲ್ಲದೇ ಕಾಯಿಲೆ ತೀವ್ರತೆ ಕೂಡ ಜಾಸ್ತಿ ಇದೆ. ಹೀಗಾಗಿ ಮುನ್ನೆಚ್ಚರಿಕೆ ಅತ್ಯಗತ್ಯ ಎಂದಿದ್ದಾರೆ.
ಇದೇ ವೇಳೆ ಟೆಸ್ಟ್ ಮಾಡಿಸಿಕೊಳ್ಳಲು ಭಯಬೇಡ ಎಂದ ಅವರು, ಮೊದಮೊದಲು ಕೋವಿಡ್ ಟೆಸ್ಟ್ ಮಾಡಿಸಿ ಪಾಸಿಟಿವ್ ಬಂದರೆ ಸಾಮಾಜಿಕ ಬಹಿಷ್ಕಾರ ಮಾಡುವ ರೀತಿ ಪರಿಸ್ಥಿತಿ ಇರ್ತಿತು. ಆದರೆ ಇದೀಗ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಯಬೇಡ. ಸಾಮಾಜಿಕ ಅಂತರ ಅಗತ್ಯವಿಲ್ಲ, ಬದಲಿಗೆ ವ್ಯಕ್ತಿಗತ ಅಂತರ ಕಾಯ್ದು ಕೊಳ್ಳಬೇಕು ಎಂದು ಸಲಹೆ ನೀಡಿದರು.










