ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕೆ ಲಾಕ್ ಡೌನ್ ಪರಿಹಾರವಲ್ಲ ಎಂದು ಹೇಳಿಕೆ ನೀಡಿದ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ರಾಹುಲ್ ಗಾಂಧಿಯವರ ಪ್ರಕಾರ ಲಾಕ್ಡೌನ್ ಪರಿಹಾರವಲ್ಲ. ಹಾಗಿದ್ದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೇಕೆ ಮೊದಲು ಲಾಕ್ಡೌನ್ ವಿಸ್ತರಣೆ ಮಾಡಿದರು’ ಎಂದು ಪ್ರಶ್ನಿಸಿದ್ದಾರೆ.
ಇಂದು ವಿಡಿಯೋ ಆಪ್ ಮೂಲಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ‘ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್ಡೌನ್ ಪರಿಹಾರವಲ್ಲ. ನಿರ್ಬಂಧಗಳು ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಬಹುದು ಅಷ್ಟೇ. ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು’ ಎಂದು ಹೇಳಿದ್ದರು.








