ನವದೆಹಲಿ : ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಲಾಕ್ ಡೌನ್ ಕ್ರಮ ಶಾಶ್ವತ ಪರಿಹಾರವಲ್ಲ, ವಿರಾಮದ ಬಟನ್ ಅಷ್ಟೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲಾಕ್ ಡೌನ್ ನಿಂದ ಹೊರಬರುತ್ತಿದ್ದಂತೆಯೇ ಮತ್ತೆ ವೈರಸ್ ಹರಡಲು ಆರಂಭಿಸುತ್ತದೆ. ಪರೀಕ್ಷೆಗಳನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕಿದೆ. ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕಿದೆ. ರೋಗಿಗಳನ್ನು ಪತ್ತೆಹಚ್ಚುವುದರ ಜೊತೆಗೆ, ಭಾರತದ ನಕ್ಷೆ ಸಿದ್ಧಪಡಿಸಿ ವೈರಸ್ ಎಲ್ಲೆಲ್ಲಿ ಹರಡುತ್ತಿದೆ ಎಂಬುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನು ನಾವು ಈಗಾಗಲೇ ಸಂಕಷ್ಟದ ಹಂತ ತಲುಪಿ ಬಿಟ್ಟಿದ್ದೇವೆ. ಇದೀಗ ನಾವು ತುರ್ತು ಪರಿಸ್ಥಿಯಲ್ಲಿದ್ದೇವೆ. ವೈರಸ್ ವಿರುದ್ಧ ಹೋರಾಡಲು ಭಾರತ ಒಗ್ಗೂಡಬೇಕಿದೆ. ಯೋಜಿತ ತಂತ್ರಗಳ ಮೂಲಕ ನಾವು ಕೆಲಸ ಮಾಡಬೇಕಿದೆ. ಹೆಚ್ಚೆಚ್ಚು ಪರೀಕ್ಷೆ ನಡೆಸುವುದರಿಂದ ವೈರಸ್ ಮಟ್ಟ ಹಾಕಬಹುದು. ಪರೀಕ್ಷೆ ನಡೆಸುವ ಮೂಲಕ ವೈರಸ್ ಯಾವ ರೀತಿ ಪಸರುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.








